ನಾಯಕತ್ವದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-07-20 14:13 GMT

ಕೋಟ ಜು.20: ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅನುಭವದ ವಿಚಾರಧಾರೆಯ ಮೇರೆಗೆ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೋಟತಟ್ಟುವಿನಿಂದ ಕೋಡಿಕನ್ಯಾಣದವರೆಗೆ 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 5ಕಿ.ಮೀ ಉದ್ದದ ನೂತನ ಕಾಂಕ್ರೀಟ್ ರಸ್ತೆಯನ್ನು ಮಂಗಳವಾರ ಕಾಲ್ನಡಿಗೆ ಮೂಲಕ ಸಾಗಿ ವೀಕ್ಷಣೆ ಮಾಡಿ, ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಉಸ್ತುವಾರಿ ಮಂತ್ರಿಗಳಿಗೆ ತಮ್ಮ ತಮ್ಮ ಜಿಲ್ಲೆ ಹಾಗೂ ಅವರವರ ಕ್ಷೇತ್ರದ ಬಗ್ಗೆ ಗಮನ ಕೊಡಲು ಹೇಳಿದ್ದಾರೆ. ಕೋವಿಡ್ ನಿಯಂತ್ರಣವೂ ಸೇರಿದಂತೆ ಅಭಿವೃದ್ಧಿಗಳ ಬಗೆಗೆ ಹೆಚ್ಚು ಗಮನ ಕೊಡುವ ಅವಶ್ಯಕತೆ ಇದೆ. ಪಕ್ಷದಲ್ಲಿ ಏನಾದರೂ ನಾಯಕ, ನಾಯಕತ್ವದ ಚರ್ಚೆಗಳು ಬಂದಾಗ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರು, ಹೈಕಮಾಂಡ್ ಅದರ ಬಗ್ಗೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದರು.

ಡಿಕೆಶಿ ಸೇರಿದಂತೆ ಕಾಂಗ್ರೆಸಿನವರು ವಾಸ್ತವಿಕತೆಯತೆಯನ್ನು ಮರೆಮಾಚಬಾರದು. ಬಿಜೆಪಿ ಸರಕಾರ ಮೀನುಗಾರರ ಎಲ್ಲಾ ಸವಲತ್ತುಗಳ ಬಗ್ಗೆ ಶಕ್ತಿ ಮೀರಿ ಸಹಕಾರ ಕೊಟ್ಟಿದೆ. ನಾನು ಮೀನುಗಾರಿಕಾ ಸಚಿವರಾಗಿದ್ದ ವೇಳೆ ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರಿಗೆ ಕೋವಿಡ್ ಸಂದರ್ಭದಲ್ಲೂ 181 ಕೋ.ರೂ. ಬಿಡುಗಡೆ ಮಾಡಿ, ಶಿಲಾನ್ಯಾಸ ನೆರವೇರಿಸಿದ್ದೇವೆ ಎಂದು ಅವರು ತಿಳಿಸಿದರು.

ಕೋಡಿ ಕನ್ಯಾಣದಲ್ಲಿರುವ ಜಟ್ಟಿ, ಹೂಳೆತ್ತುವ ಕಾಮಗಾರಿ ಸಿಆರ್‌ಝಡ್ ಹಾಗೂ ಹಸಿರು ಪೀಠದ ಸಮಸ್ಯೆಯಿಂದಾಗಿ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿತ್ತು. ಇದೀಗ ನಾನು, ಸಚಿವ ಅಂಗಾರ ಸೇರಿ ಅದರ ಹೂಳೆತ್ತುವ ಬಗ್ಗೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ಶಾಸಕರ ವಿನಂತಿ ಮೇರೆಗೆ ಮುಖ್ಯಮಂತ್ರಿಗಳು 23,000 ಮಹಿಳಾ ಮೀನುಗಾರರ 60 ಕೋಟಿ ಸಾಲಮನ್ನಾ ಮಾಡಿದ್ದಾರೆ. ತಾಂತ್ರಿಕ ಕಾರಣದಿಂದ ಒಂದೆರಡು ಸಾವಿರ ಮಂದಿಗೆ ಹೆಚ್ಚು ಕಡಿಮೆಯಾಗಿ ರಬಹುದು. ಅದನ್ನು ಪರಿಶೀಲಿಸಿ ಕೊಡುವ ಕೆಲಸವನ್ನು ಮಾುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಾಜಿ ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಸಾಲಿಗ್ರಾಮ ಪಂ. ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಸದಸ್ಯ ರವೀಂದ್ರ ತಿಂಗಳಾಯ ಪ್ರಮುಖರಾದ ವಿಠಲ ಪೂಜಾರಿ, ರಘು ತಿಂಗಳಾಯ, ಪ್ರಭಾಕರ್ ಮೆಂಡನ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News