ಮಣಿಪಾಲ: ಸಾರಿಗೆ, ಶಿಕ್ಷಣ ಶುಲ್ಕಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುವಂತೆ ಆಗ್ರಹಿಸಿ ಧರಣಿ

Update: 2021-07-20 14:18 GMT

ಮಣಿಪಾಲ, ಜು.20: ವಿದ್ಯಾರ್ಥಿಗಳಿಗೆ ಸಾರಿಗೆ ಹಾಗೂ ಶಿಕ್ಷಣ ಶುಲ್ಕಗಳಲ್ಲಿ ರಿಯಾಯಿತಿ ಘೋಷಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಮಣಿಪಾಲ ಟೈಗರ್ ಸರ್ಕಲ್ ಬಳಿ ಧರಣಿ ನಡೆಸಲಾಯಿತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿ, ಬಸ್‌ದರ ಏರಿಕೆಯ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಬಾರದು. ಬಸ್ಸು ಮಾಲಕರು ಸರಕಾರದೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು. ಜನ ಸಾಮಾನ್ಯರಿಗೆ ವಿನಾಕಾರಣ ತೊಂದರೆ ನೀಡಬಾರದು ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು. ಸರಕಾರದ ಶಿಕ್ಷಣ ವ್ಯವಸ್ಥೆಯೂ ಅವನತಿಯತ್ತ ಸಾಗುತ್ತಿದೆ. ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯಗಳಿಲ್ಲದೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿಲ್ಲ. ಕನಿಷ್ಟ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯವನ್ನಾದರೂ ಸರಕಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ, ಎನ್‌ಎಸ್‌ಯುಐ ನಾಯಕರಾದ ಸಯ್ಯದ್ ಫಾರೂಕ್, ತೌಸಿಫ್, ಮಸೂದ್ ಅಫಕ್, ಅಕ್ರಮ್, ಕ್ರಿಸ್ಟನ್, ಫಯಾಲ್, ಸಾಯಿ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News