ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಗೆ ಅರ್ಜಿ ಆಹ್ವಾನ

Update: 2021-07-20 17:45 GMT

ಮಂಗಳೂರು, ಜು.20: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ‘ರಾಷ್ಟ್ರೀಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ’ ಹೆಸರಿನಡಿ ರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆ ಆಯೋಜಿಸಿದೆ.
ಗ್ರಾಮಗಳಲ್ಲಿ ಶೌಚಾಲಯ ಬಳಕೆ ಹಾಗೂ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಕುರಿತಾಗಿ ಗ್ರಾಮೀಣ ಜನರಿಗೆ ಬೃಹತ್ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಜಾಗೃತಿ ಮೂಡಿಸಲು ಈ ಕಿರುಚಿತ್ರ ಸ್ಪರ್ಧೆ ಆಯೋಜಿಸಿದೆ.

ಕಿರುಚಿತ್ರ ಸ್ಪರ್ಧೆಯು ಎರಡು ವರ್ಗಗಳಲ್ಲಿ ನಡೆಯಲಿದೆ. ಮೊದಲನೆಯ ವರ್ಗವು ವಿಷಯಾಧಾರಿತವಾಗಿದ್ದು, ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ಹಾಗೂ ಮಲತ್ಯಾಜ್ಯ ನಿರ್ವಹಣೆ ಮತ್ತು ನಡಾವಳಿ ಬದಲಾವಣೆ ಸೇರಿದಂತೆ ಒಟ್ಟು 6 ವಿಷಯಗಳನ್ನು ಹೊಂದಿರುತ್ತದೆ. ಪ್ರತಿ ವಿಷಯಗಳಿಗೆ 3 ನಗದು ಬಹುಮಾನಗಳಿದ್ದು, ಪ್ರಥಮ ಬಹುಮಾನ 1,60,000 ರೂ., ದ್ವಿತೀಯ ಬಹುಮಾನ 60,000 ರೂ. ಹಾಗೂ ತೃತೀಯ ಬಹುಮಾನಕ್ಕೆ 30,000 ರೂ. ನಗದನ್ನು ನೀಡಲಾಗುವುದು.

ಎರಡನೇ ವಿಷಯವು ಬಯಲು ಬಹಿರ್ದೆಸೆ ಮುಕ್ತ ಪ್ಲಸ್ ಕುರಿತಾಗಿದ್ದು ಸ್ವ.ಭಾ.ಮಿ.(ಗ್ರಾ) ಹಂತ -2 ಅಡಿಯಲ್ಲಿ ಭೌಗೋಳಿಕ ವಿಷಯದಲ್ಲಿ ಐದು ವಿಭಾಗದಲ್ಲಿ ಸ್ಫರ್ಧೆ ನಡೆಯಲಿದೆ. ಮರುಭೂಮಿ, ಗುಡ್ಡಗಾಡು ಪ್ರದೇಶ, ಕರಾವಳಿ ಪ್ರದೇಶ, ಬಯಲು ಪ್ರದೇಶ, ಪ್ರವಾಹ ಪೀಡಿತ ಪ್ರದೇಶ ಎಂಬ ವಿಷಯಗಳ ಆಧಾರದಲ್ಲಿ ನಡೆಯಲಿದೆ. ಪ್ರತಿ ವಿಷಯಗಳಿಗೆ ಮೂರು ನಗದು ಬಹುಮಾನಗಳಿದ್ದು ಪ್ರಥಮ ಬಹುಮಾನ 2,00,000 ರೂ., ದ್ವಿತೀಯ ಬಹುಮಾನ 1,20,000 ರೂ. ಹಾಗೂ ತೃತೀಯ 80,000 ರೂ.ಗಳಾಗಿವೆ.

10 ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸಾಂಸ್ಥಿಕ ವಿಭಾಗದಲ್ಲಿ ಗ್ರಾಮ ಪಂಚಾಯತ್‌ಗಳು/ ಸಮುದಾಯ ಆಧಾರಿತ ಸಂಸ್ಥೆಗಳು/ ಸರಕಾರೇತರ ಸಂಸ್ಥೆಗಳು/ಸ್ವ-ಸಹಾಯ ಸಂಘ ಸಂಸ್ಥೆಗಳು ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯ ಉದ್ದೇಶದಂತೆ ಗ್ರಾಮೀಣ ಭಾಗದಲ್ಲಿ ತಯಾರಿಸಲಾದ ಕಿರುಚಿತ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ವರ್ಷದ ಕೊನೆಯಲ್ಲಿ ನವದೆಹಲಿಯಲ್ಲಿ ನಡೆಯುವ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಮಾರಂಭದಲ್ಲಿ ಈ ಎರಡು ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು.

ಆಸಕ್ತರು ತಾವು ತಯಾರಿಸಿದ ಕಿರುಚಿತ್ರ/ಚಲನಚಿತ್ರಗಳನ್ನು ತಮ್ಮ ಅಧಿಕೃತ ಕ್ರಿಯಾತ್ಮಕ ಇ-ಮೇಲ್ ಐಡಿಯಿಂದ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಕೇಂದ್ರ ಸರಕಾರದ www.mygov.in ಲಿಂಕ್‌ನಲ್ಲಿ ಲಾಗಿನ್ ಆಗಿ ತಮ್ಮ ಸ್ವಯಂ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಬೇಕು. ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಲಿಂಕ್‌ನ್ನು ದಾಖಲಿಸಬೇಕು. ಪ್ರಶಸ್ತಿಗೆ ಕಿರುಚಿತ್ರಗಳನ್ನು ಆಯ್ಕೆ ಮಾಡುವಲ್ಲಿ ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಐಇಸಿ ಜಿಲ್ಲಾ ಸಮಾಲೋಚಕರು, ಸ್ವಚ್ಛ ಭಾರತ್ ಮಿಷನ್ (ಗ್ರಾ), ಶಾಖೆ, ಜಿಪಂ ಹಾಗೂ ದೂ.ಸಂ.: 0824-2451222, 6282566188ನ್ನು ಸಂಪರ್ಕಿಸುವಂತೆ ಜಿಪಂ ಸಿಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News