ರಾಜ್ಯದ ಬಿಜೆಪಿ ಸರಕಾರ ಸದ್ಯವೇ ಪತನ, ಸ್ವಾಮೀಜಿಗಳೇ ಸರಕಾರ ಕಟ್ಟಲು ಹೊರಟಿದ್ದಾರೆ: ಸೊರಕೆ

Update: 2021-07-22 14:41 GMT

ಕೋಟ, ಜು.22: ರಾಜ್ಯದ ಬಿಜೆಪಿ ಸರಕಾರ ಸದ್ಯದಲ್ಲೇ ಪತನಗೊಳ್ಳಲಿದೆ. ಕರ್ನಾಟಕದಲ್ಲಿ ಮಠಗಳ ಸ್ವಾಮೀಜಿಗಳೇ ಸರಕಾರ ಕಟ್ಟಲು ಹೊರಟಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ ಸೊರಕೆ ಹೇಳಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ, ಸರಕಾರದಲ್ಲಿ ನಡೆದ ಅನೇಕ ಅನೇಕ ಭ್ರಷ್ಟಾಚಾರ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು, ಎಡಮೊಗೆ ದಿ. ಉದಯ ಗಾಣಿಗರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಹಾಗೂ ಮೃತರ ಕುಟುಂಬಕ್ಕೆ ಸರಕಾರದಿಂದ ರೂ. 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕೋಟ ಬ್ಲಾಕ್ ಕಚೇರಿಯಿಂದ ಸಾಲಿಗ್ರಾಮ ಪೇಟೆಯವರೆಗೆ ನಡೆದ ಪಾದಯಾತ್ರೆಗೆ ವಿನಯಕುಮಾರ್ ಸೊರಕೆ ಚಾಲನೆ ನೀಡಿದರಲ್ಲದೇ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕೊಕ್ಕರ್ಣೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರವೀಣ್ ಪೂಜಾರಿ ಕೊಲೆಯಾಯಿತು. ಈ ಕೊಲೆಯಲ್ಲಿ ಬಿಜೆಪಿಗರೇ ಆರೋಪಿಗಳು. ಅದೇ ರೀತಿ ಕೋಟದಲ್ಲಿ ಅವಳಿ ಕೊಲೆ ನಡೆಯಿತು.ಈ ಕೊಲೆಯಲ್ಲೂ ಬಿಜೆಪಿ ಜಿಪಂ ಸದಸ್ಯನೆ ಆರೋಪಿ. ಅದೇ ರೀತಿ ಮೊನ್ನೆ ಮೊನ್ನೆ ಎಡಮೊಗೆಯಲ್ಲಿ ಉದಯ ಗಾಣಿಗರ ಕೊಲೆಯಾಯಿತು. ಇಲ್ಲೂ ಬಿಜೆಪಿ ಪಕ್ಷದ ಗ್ರಾಪಂ ಅಧ್ಯಕ್ಷ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೋಪಿಗಳು. ಎಲ್ಲಾ ಪ್ರಕರಣ ಗಳಲ್ಲಿ ಸತ್ತವರು ಮತ್ತು ಆರೋಪಿಗಳೆಲ್ಲರೂ ಬಿಜೆಪಿ ಪಕ್ಷದವರೇ ಆಗಿದ್ದಾರೆ. ಆದರೆ ಶಾಸಕರಾಗಲಿ, ಸಂಸದರಾಗಲಿ ಕೊಲೆಯಾದವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಒಂದು ಸಾಂತ್ವನ ಹೇಳಿ ಧೈರ್ಯ ತುಂಬು ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಅಲ್ಲದೆ ಬಿಜೆಪಿ ಪಕ್ಷದವರು ಈ ಕೇಸಗಳ ದಾರಿ ತಪ್ಪಿಸಿ, ಕೇಸನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಇದ್ದಾರೆ. ಎಡಮೊಗೆ ವಿಚಾರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ರಾಜ್ಯದ ಗೃಹ ಸಚಿವರೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ಮೃತರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ನಮ್ಮ ಕಾಂಗ್ರೆಸ್ ಮಾಡಿದೆ ಎಂದರು.

ಈ ಮೂರು ಕೇಸ್‌ಗಳನ್ನು ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಕೊಲೆಯಾದ ಕುಟುಂಬಕ್ಕೆ ನ್ಯಾಯ ಸಿಗಬೇಕು ಮತ್ತು ಮೃತರ ಕುಟುಂಬಕ್ಕೆ ಸರಕಾರದಿಂದ 25 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ನಾವು ಜಿಲ್ಲೆಯಲ್ಲಿ ಕಾಂಗ್ರೆಸ್‌ನ 10 ಬ್ಲಾಕ್‌ಗಳಲ್ಲೂ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಅಲ್ಲದೇ ಮುಖಂಡರಾದ ನಟರಾಜ್ ಹೊಳ್ಳ, ಅಜಿತ್ ಶೆಟ್ಟಿ, ಕಲ್ಪನಾ ದಿನಕರ, ಬಾಲಕೃಷ್ಣ ಪೂಜಾರಿ, ರೋಶಿನಿ ಒಲಿವೆರಾ, ಕಿಶೋರ್ ಶೆಟ್ಟಿ, ತಿಮ್ಮ ಪೂಜಾರಿ ಕೋಟ, ಡೆರಿಕ್ ಡಿಸೋಜ, ನಟರಾಜ್ ಹೊಳ್ಳ, ರತ್ನಾಕರ ಶ್ರೀಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News