ಅಪಾಯಮಟ್ಟದಲ್ಲಿ ಹರಿಯುತ್ತಿರುವ ವಶಿಷ್ಟಿ ನದಿ: ಕೊಂಕಣ ರೈಲು ಸಂಚಾರ ವ್ಯತ್ಯಯ

Update: 2021-07-22 17:13 GMT

ಉಡುಪಿ, ಜು.22: ಮಹಾರಾಷ್ಟ್ರದಲ್ಲಿ ಕೊಂಕಣ ರೈಲ್ವೆ ಮಾರ್ಗದ ಚಿಪ್ಳೂಣ್ ಹಾಗೂ ಕಮತೆ ನಿಲ್ದಾಣಗಳ ನಡುವೆ ರತ್ನಗಿರಿ ಪ್ರಾಂತ್ಯದಲ್ಲಿ ಹರಿ ಯುವ ವಶಿಷ್ಟಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆಯಲ್ಲಿ ಹಾದುಹೋಗುವ ರೈಲು ಹಳಿಗಳ ಮೇಲೂ ನೀರು ಹರಿಯುತ್ತಿರುವು ದರಿಂದ ರೈಲು ಸಂಚಾರವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದ್ದು, ಇನ್ನು ಕೆಲವು ರೈಲುಗಳನ್ನು ಕಮತೆ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ. ಕೆಲವು ರೈಲುಗಳ ಸಂಚಾರವನ್ನು 3-4ಗಂಟೆಗಳ ಕಾಲ ವಿಳಂಬಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ರೈಲು ನಂ.01134 ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಎಂಟಿ ವಿಶೇಷ ರೈಲನ್ನು ಮುಂಜಾನೆ 5:17ರಿಂದ ಕಮತೆ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ. ಎರ್ನಾಕುಲಂ-ಎಚ್.ನಿಝಾಮುದ್ದೀನ್ ದೈನಂದಿನ ವಿಶೇಷ ರೈಲನ್ನು ಸಂಗಮೇಶ್ವರ ರೋಡ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ರೈಲು ನಂ.02619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ತನ್ನ ಇಂದಿನ ಪ್ರಯಾಣವನ್ನು ಅಪರಾಹ್ನ 3:20ರ ಬದಲು ಸಂಜೆ 6:30ಕ್ಕೆ ಅಂದರೆ 3ಗಂಟೆ 10ನಿಮಿಷ ವಿಳಂಬವಾಗಿ ಲೋಕಮಾನ್ಯ ತಿಲಕ್ ಸ್ಟೇಶನ್‌ನಿಂದ ಹೊರಡಲಿದೆ.

ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ದೈನಂದಿನ ವಿಶೇಷ ರೈಲು ತನ್ನ ಪ್ರಯಾಣವನ್ನು ಇಂದಿನ ಪ್ರಯಾಣವನ್ನು ಬೆಳಗ್ಗೆ 11:40ರ ಬದಲು ಐದು ಗಂಟೆ ವಿಳಂಬವಾಗಿ ಸಂಜೆ 4:40ಕ್ಕೆ ಪ್ರಾರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎರ್ನಾಕುಲಂ-ಓಖಾ ವಾರಕ್ಕೆರಡು ಬಾರಿ ಸಂಚರಿಸುವ ವಿಶೇಷ ರೈಲನ್ನು ಮಡಗಾಂವ್‌ನಲ್ಲಿ ಬದಲಿ ಮಾರ್ಗದಲ್ಲಿ ಕಳುಹಿಸಲಾಗಿದೆ. ಅದೇ ರೀತಿ ಎಚ್.ನಿಝಾಮುದ್ದೀನ್- ಎರ್ನಾಕುಲಂ ದೈನಂದಿನ ರೈಲಿನ ಮಾರ್ಗವನ್ನು ಬದಲಿಸಿ ಬೇರೆ ಮಾರ್ಗದಲ್ಲಿ ಕಳುಹಿಸಲಾಗಿದೆ.

ಮುಂಬೈಯ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ನಡುವೆ ಸಂಚರಿಸುವ ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ‘ಮತ್ಸಗಂಧ’ ದೈನಂದಿಕ ವಿಶೇಷ ರೈಲು ಹಾಗೂ ಮುಂಬೈ ಸಿಎಸ್‌ಎಐಂಟಿ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ರೈಲಿನ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ರಾತ್ರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News