ಕೆಎಂಎಫ್ ಉತ್ಪನ್ನದ ಮೇಲೆ ತುಳು ಭಾಷೆ ಮುದ್ರಿಸಲು ಶಾಸಕ ಕಾಮತ್ ಪತ್ರ

Update: 2021-07-23 15:17 GMT

ಮಂಗಳೂರು, ಜು.23: ದ.ಕ. ಜಿಲ್ಲೆಯಲ್ಲಿ ಕೆಎಂಎಫ್ ಸಂಸ್ಥೆಯಿಂದ ಸರಬರಾಜಾಗುವ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳು ಲಿಪಿಯ ವರ್ಣಮಾಲೆ ಮುದ್ರಿಸಿ ಹಂಚುವಂತೆ ಶಾಸಕ ವೇದವ್ಯಾಸ್ ಕಾಮತ್ ಜಿಲ್ಲಾ ಹಾಲು ಉತ್ಪಾದಕ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಶಾಸಕ ಕಾಮತ್, ಕೆಎಂಎಫ್‌ನಿಂದ ನಿತ್ಯ ಸರಬರಾಜಾಗುತ್ತಿರುವ ಹಾಲು, ಮೊಸರು, ಇನ್ನಿತರ ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿಸಿ ಜಿಲ್ಲೆಯ ಬಳಕೆದಾರರಿಗೆ ಸರಬರಾಜು ಮಾಡಲಾಗುತ್ತಿದೆ. ತುಳು ನಾಡಿನಲ್ಲಿ ತುಳು ಭಾಷೆಯ ಹಾಗೂ ಲಿಪಿಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಉದ್ದೇಶವಾಗಿದೆ ಎಂದರು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮಾತನಾಡುವ ತುಳು ಭಾಷೆಗೆ ಐತಿಹಾಸಿಕ ಹಿನ್ನೆಲೆ ಇದೆ. ಅನೇಕ ಶಾಸನಗಳಲ್ಲಿ ತುಳು ಲಿಪಿ ಕಂಡುಬಂದಿದೆ. ಭಾಷೆಯನ್ನು ಬಳಸಿದಾಗ ಮಾತ್ರ ಅದರ ಉಳಿವು ಸಾಧ್ಯ ಎಂದರು.

ಕೆಎಂಎಫ್ ಸಂಸ್ಥೆಯ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳು ಲಿಪಿಯ ವರ್ಣಮಾಲೆಯ ಬಳಕೆಗೆ ಈಗಾಗಲೇ ಅಧ್ಯಕ್ಷರಿಗೆ ಮತ್ತು ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಸಹಕಾರಿ ಸಚಿವರಿಗೂ ಇದರ ಕುರಿತು ಮಾಹಿತಿ ನೀಡಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News