ಸಂಸದರ ಧ್ವನಿ ತಿಳಿಯದವರು ಜನರಿಗೆ ಸ್ಪಂದಿಸುವರೇ : ರಮಾನಾಥ ರೈ ಪ್ರಶ್ನೆ

Update: 2021-07-24 10:07 GMT

ಮಂಗಳೂರು, ಜು. 24: ಕಳೆದ 15 ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ತಮ್ಮದೇ ಸಂಸದರ ಧ್ವನಿಯನ್ನು ಗುರುತಿಸಲಾಗದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವರೇ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತಮ್ಮ ಸೇಹಿತರ ಜತೆ ಮಾತನಾಡುತ್ತಾ ಮುಖ್ಯಮಂತ್ರಿ ಬದಲಾವಣೆಯ ಕುರಿತಾದ ಹೇಳಿಕೆ ನೀಡಿರುವಂತಹ ಆಡಿಯೋ ಧ್ವನಿ ನಳಿನ್ ಕುಮಾರ್ ಕಟೀಲ್ ಅವರದ್ದೇ. ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೂ ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ ಎಂದು ಇಲ್ಲಿನ ಶಾಸಕರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದಾರೆ. ಸಾಮಾಜಿತ ತಾಲತಾಣಗಳಲ್ಲಿನ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪರಿಣಿತರಾಗಿರುವ ಪೊಲೀಸ್ ಆಯುಕ್ತರು ಒಂದು ವಾರದಲ್ಲಿ ಅದು ಬೇರೆಯವರ ಧ್ವನಿ ಎಂಬುದನ್ನು ಕಂಡು ಹಿಡಿಯಲಾಗಿಲ್ಲ. ಬಿಜೆಪಿಯವರು ಏನೇ ತಪ್ಪು ಮಾಡಿದರೂ ಅದನ್ನು ವಿಪಕ್ಷದ ಮೇಲೆ ಹೊರಿಸಿ, ಕಾಂಗ್ರೆಸೇ ಕಾರಣ ಎಂಬ ರೀತಿಯಲ್ಲಿ ಮಾತನಾಡುತ್ತಾರೆ. ಈ ಪ್ರಕರಣ ದಲ್ಲೂ ಅದೇ ರೀತಿಯ ಆಪಾದನೆ ಮಾಡಿದ್ದಾರೆ. ಹಾಗಾಗಿ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂದವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರ ಮೇಲೆ ಪೌಷ್ಠಿ ಆಹಾರದಲ್ಲಿನ ಅವ್ಯವಹಾರದ ಬಗೆಗಿನ ಆರೋಪ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಮಾಜಿ ಸಚಿವ ರಮಾನಾಥ ರೈ, ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್ ಪತ್ರಿಕೆಗಳು ಸರಕಾದ ವೈಫಲ್ಯಗಳ ಬಗ್ಗೆ ವರದಿ ಮಾಡಿರುವುದಕ್ಕೆ ಪ್ರತಿಯಾಗಿ ಅವುಗಳ ಕಚೇರಿ ಮೇಲೆ ಇಡಿ ದಾಳಿ ನಡೆಸಲಾ ಗಿದೆ ಎಂದು ಆರೋಪಿಸಿದರು.

ಪೆಗಸಸ್ ತುಂಬಾ ಗಂಭೀರವಾದ ಪ್ರಕರಣವಾಗಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಇದರ ದುರ್ಬಳಕೆ ಕುರಿತಂತೆ ತನಿಖೆ ಆದೇಶಿಸಲಾಗಿದೆ. ನಮ್ಮ ದೇಶದ ಸರಕಾರ ಜೀವಂತವಾಗಿದ್ದರೆ ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಅಪ್ಪಿ, ಪುರುಷೋತ್ತಮ ಚಿತ್ರಾಪುರ, ನೀರಜ್ ಪಾಲ್, ಸುರೇಂದ್ರ ಕಂಬಳಿ, ಅಶಿತ್ ಪಿರೇರಾ, ಶಬೀರ್, ಫಾರೂಕ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News