ಮನೆ ಯಜಮಾನನ ನಿಧನದಿಂದ ಕಂಗಾಲಾದ ಕುಟುಂಬ: ಸಹಾಯಕ್ಕಾಗಿ ಮನವಿ

Update: 2021-07-25 14:33 GMT

ಮಂಗಳೂರು, ಜು. 25: ಮನೆಯ ಯಜಮಾನನ ನಿಧನದಿಂದ ಬಡ ಕುಟುಂಬವೊಂದು ಬದುಕು ಸಾಗಿಸಲಾಗದೆ ಕಂಗಾಲಾಗಿದ್ದು, ದಾನಿಗಳು ಸಹಾಯ ಮಾಡುವಂತೆ ಮನೆಯ ಯಜಮಾನಿ ಮನವಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಪಡಂಬಿಲ ನಿವಾಸಿ ಅಬ್ದುಲ್ ಹಮೀದ್ ಜೂ.20ರಂದು ನಿಧನರಾಗಿದ್ದಾರೆ. ಆ ಬಳಿಕ ಅವರ ಕುಟುಂಬ ಬದುಕು ಸಾಗಿಸಲು ಸಾಧ್ಯವಾಗದೆ ಕಷ್ಟದ ದಿನಗಳನ್ನೇ ದೂಡುತ್ತಿವೆ.

ಅಬ್ದುಲ್ ಹಮೀದ್ ಸುಮಾರು 15 ವರ್ಷದ ಹಿಂದೆ ಖತೀಜತುಲ್ ಕುಬ್ರಾ ಅವರನ್ನು ಮದುವೆಯಾಗಿದ್ದು, 1 ಗಂಡು ಮತ್ತು 1 ಹೆಣ್ಣು ಮಗುವಿದೆ. ಇಬ್ಬರೂ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಾಗಿದ್ದಾರೆ. ಹಮೀದ್ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ಬ್ಯಾಂಕ್ ಮತ್ತು ಕೈ ಸಾಲ ಮಾಡಿ ಮನೆಯನ್ನು ಕಟ್ಟಿಸಲು ಆರಂಭಿಸಿದ್ದರು. ಮನೆ ಕೆಲಸ ಅರ್ಧದಲ್ಲಿರುವಾಗಲೇ ಹಮೀದ್ ಅನಾರೋಗ್ಯ ಪೀಡಿತರಾದರು. ಆದರೂ ಹೇಗೋ ಮನೆಯ ಕಾಮಗಾರಿಯನ್ನು ಪೂರ್ತಿಗೊಳಿಸಿದ್ದರು. ಈ ಮಧ್ಯೆ ಹಮೀದ್‌ ಅವರ ಎಡಗಾಲಿನಲ್ಲಿ ಊತ ಉಂಟಾಗಿದ್ದು, ಕ್ರಮೇಣ ಅದು ಉಲ್ಬಣಿಸುತ್ತಾ ಹೋಯಿತು. ಸತತ 10 ವರ್ಷಗಳ ಕಾಲ ನೋವಿನಿಂದ ಬಳಲಿದ ಹಮೀದ್ ಕೊನೆಗೆ ಕೋವಿಡ್ ಸೋಂಕಿನಿಂದ ನಿಧನರಾದರು.

‘ಪತಿಯ ನಿಧನದ ಬಳಿಕ ನಾನು ಕಂಗಾಲಾಗಿರುವೆ. ಅಲ್ಲದೆ ನಾನು ಮತ್ತು ನನ್ನಿಬ್ಬರು ಮಕ್ಕಳು ಕೂಡ ಕೋವಿಡ್ ಪಾಸಿಟಿವ್‌ ಗೊಳಗಾಗಿದ್ದೆವು. ನಮ್ಮೆಲ್ಲಾ ಕಷ್ಟದ ವೇಳೆ ನನ್ನ ಸಹೋದದರು ಕೈಲಾದಷ್ಟು ನೆರವು ನೀಡಿದ್ದರು. ಅಲ್ಲದೆ ಪರಿಚಯಸ್ಥರಿಂದ ಅವರು ಕೂಡ ಕೈ ಸಾಲ ಮಾಡಿದ್ದಾರೆ. ಈಗಲೂ ನನ್ನ ಅರೋಗ್ಯ ಸರಿಯಾಗಿಲ್ಲ. ಮದ್ದಿಗೂ ಹಣವಿಲ್ಲ. ಪತಿ ಮಾಡಿದ ಸಾಲ ಮರಳಿಸಲು ಕೆಲವರು ಆಗಾಗ ಕರೆ ಮಾಡುತ್ತಿದ್ದಾರೆ. ಮುಂದೇನು ಮಾಡಬೇಕು ಎಂದು ನನಗೆ ದಿಕ್ಕೇ ತೋಚುವುದಿಲ್ಲ. ನನ್ನಿಬ್ಬರು ಮಕ್ಕಳು ಶಾಲೆಗೆ ಹೋಗುವವರು. ಕುಟುಂಬಕ್ಕೆ ಬೇರೆ ಆದಾಯದ ಮೂಲಗಳಿಲ್ಲ. ಒಂದೆಡೆ ಮನೆ ನಿರ್ಮಿಸಲು ಮತ್ತು ಆಸ್ಪತ್ರೆಯ ಬಿಲ್‌ ಪಾವತಿಸಲು ಸಾಕಷ್ಟು ಸಾಲ ಮಾಡಿದ್ದೇನೆ. ಹಾಗಾಗಿ ಸಹೃದಯಿ ದಾನಿಗಳು ನನ್ನ ಕುಟುಂಬಕ್ಕೆ ಸಹಾಯಧನ ನೀಡಿ ಸಹಕರಿಸಬೇಕು’ ಎಂದು ಖತೀಜತುಲ್ ಕುಬ್ರಾ ಮನವಿ ಮಾಡಿದ್ದಾರೆ.

ದಾನಿಗಳು ಖದೀಜತುಲ್ ಕುಬ್ರಾ, ಉಳಿತಾಯ ಖಾತೆ ಸಂಖ್ಯೆ: 4512500101548401, ಕರ್ಣಾಟಕ ಬ್ಯಾಂಕ್, ಉಜಿರೆ ಬ್ರಾಂಚ್, ಐಎಫ್‌ಎಸ್‌ಸಿ ಕೋಡ್- KARB0000451 (ಗೂಗಲ್ ಪೇ +918123654859) ಸಹಾಯಧನ ಕಳುಹಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News