ಕೋವಿಡ್ ನಿಯಮ ಉಲ್ಲಂಘಿಸಿ ಐಎಂಎಯಲ್ಲಿ ವೈದ್ಯರ ದಿನಾಚರಣೆ: ಆರೋಪ

Update: 2021-07-31 16:28 GMT

ಮಂಗಳೂರು, ಜು.31: ಐಎಂಎ ಮಂಗಳೂರು ಘಟಕದ ಸಭಾಂಗಣದಲ್ಲಿ ಆಯೋಜಿಸಲಾದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಆರೋಪಿಸಿ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ನಗರದ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಜು.29ರಂದು ಐಎಂಎ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಯಿತು. ಇಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಘಟನೆ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿದೆ. ಐಎಂಎಯ ಬಹುತೇಕ ಪದಾಧಿಕಾರಿಗಳು ಮಾಸ್ಕ್ ಧರಿಸಿಲ್ಲ. ಪರಸ್ಪರ ಹತ್ತಿರ ನಿಂತಿರುವುದು ಹಾಗೂ ಕುಳಿತಿರುವುದು. ಸುರಕ್ಷಿತ ಅಂತರ ಕಾಪಾಡುವ ಬದಲು ಕೋವಿಡ್ ನಿಯಮವನ್ನೇ ವೈದ್ಯರಿಂದ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಐಎಂಎ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವ, ಕಾರ್ಯದರ್ಶಿ ಡಾ.ಅನಿಮೇಶ್ ಜೈನ್, ಖಜಾಂಚಿ ಡಾ.ಕುಮಾರಸ್ವಾಮಿ ಯು., ಡಾ.ಎಂ.ಕೆ. ಭಟ್ ಸಂಕಬಿತ್ತಿಲು, ಡಾ.ರಾಮಚಂದ್ರ ಕಾಮತ್ ಹಾಗೂ ಪದಾಧಿಕಾರಿಗಳು ಮಾಸ್ಕ್ ಧರಿಸದೇ, ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ ನಿಯಮ ಪಾಲಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ಐಪಿಎ ಸೆಕ್ಷನ್ 269 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಸೆಕ್ಷನ್ 4, 5, 9ರ ಅಡಿಯಲ್ಲಿ ಕೋವಿಡ್ 19 ನಿಯಮ ಗಳನ್ನು ಉಲ್ಲಂಘಿಸಿದ ಐಎಂಎ ಮಂಗಳೂರು ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ನಂತರ ಕೇಸು

ಕೋವಿಡ್ ನಿಯಮ ಉಲ್ಲಂಘನೆಯ ಆರೋಪದಲ್ಲಿ ನೀಡಿದ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಲಾಗುವುದು. ನಂತರ ಎಫ್‌ಐಆರ್ ದಾಖಲಿಸಬೇಕೇ ಅಥವಾ ಮಂಗಳೂರು ಮಹಾನಗರ ಪಾಲಿಕೆಗೆ ಕೇಸು ವರ್ಗಾಯಿಸಬೇಕೇ ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News