ಟಿಕೆಎಂ ಎಲೆಕ್ಟ್ರಿಕ್ ವಾಹನ ವಾರಂಟಿ ವಿಸ್ತರಣೆ

Update: 2021-08-03 16:19 GMT

ಮಂಗಳೂರು: ವಿದ್ಯುತ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸುವ ಬದ್ಧತೆಗೆ ಅನುಗುಣವಾಗಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ದೇಶಾದ್ಯಂತ ತನ್ನ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಾರಂಟಿಯನ್ನು ವಿಸ್ತರಿಸುವುದಾಗಿ ಘೋಷಿಸಿದೆ.

ಟಿಕೆಎಂನ ಎಲ್ಲ ಎಸ್‍ಎಚ್‍ಇವಿ ಮಾಡೆಲ್ ವಿದ್ಯುತ್ ವಾಹನಗಳಿಗೆ ಅನ್ವಯವಾಗುವಂತೆ ವಾರಂಟಿಯನ್ನು ಈಗಿರುವ 3 ವರ್ಷ ಅಥವಾ 100,000 ಕಿಲೋಮೀಟರ್‍ಗಳಿಂದ 8  ವರ್ಷಗಳಿಗೆ ಅಥವಾ 1,60,000 ಕಿಲೋಮೀಟರ್ ಗಳಿಗೆ (ಯಾವುದು ಮೊದಲೋ ಅದು) ವಿಸ್ತರಿಸಲಾಗಿದ್ದು, ಆಗಸ್ಟ್ 1ರಿಂದ ಇದು ಪೂರ್ವಾನ್ವಯವಾಗಲಿದೆ. ಇದು ಜುಲೈ 28ರಂದು ಆಚರಿಸಲಾಗುವ ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ಅರ್ಥಪೂರ್ಣ ಕೊಡುಗೆಯಾಗಿದೆ.

ಇದು ಇಂಗಾಲ ಶೂನ್ಯ ಹೊರಸೂಸುವಿಕೆ ಬದ್ಧತೆಗೆ ಅನುಗುಣವಾಗಿ ಟಾಟಾ ಪರಿಸರ ಚಾಲೆಂಜ್-2050ಕ್ಕೆ ಅನುಗುಣವಾಗಿದ್ದು, ಟೊಯೋಟಾದ ಉತ್ತಮ ನಿರ್ಮಾಣ ಬದ್ಧತೆಯನ್ನು ಬಲಪಡಿಸುತ್ತದೆ. ಜತೆಗೆ ಚುರುಕಾದ, ಹೆಚ್ಚು ಸುಸ್ಥಿರ ಎನಿಸಿದ ಭವಿಷ್ಯ, ಭೂಮಂಡಲ ಮತ್ತು ಸಮಾಜದ ಮೇಲೆ ಧನಾತ್ಮಕ ಪರಿಣಾಮವನ್ನು ಸೃಷ್ಟಿಸುತ್ತದೆ ಎಂದು ಟಿಕೆಎಂ ಮಾರಾಟ ಮತ್ತು ಕಾರ್ಯತಂತ್ರ ವಿಭಾಗದ ಎಜಿಎಂ ವಿ. ವೈಸ್ಲೈನ್ ಸಿಗಾಮಣಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ 4ನೇ ಜನರೇಷನ್ ಎಸ್ಎಚ್‍ಇವಿ ಗ್ರಾಹಕರಿಗೆ (ಜನವರಿ 2019 ರಿಂದ ಮಾಡಿದ ಖರೀದಿಗಳಿಗಾಗಿ) ವಿಶೇಷ ಕೊಡುಗೆ ಬೆಲೆಯಲ್ಲಿ ಇದೇ ರೀತಿಯ ವಾರಂಟಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ನೂತನ ವಿಸ್ತರಿತ ವಾರಂಟಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು ತಮ್ಮ ಹತ್ತಿರದ ಟೊಯೋಟಾ ಡೀಲರ್ ಶಿಪ್‍ಗೆ ಭೇಟಿ ನೀಡಬಹುದು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News