ವೈಜ್ಞಾನಿಕವಾಗಿ ಶಿಕ್ಷಣ ನೀಡುವಲ್ಲಿ ಸರಕಾರ ವಿಫಲ: ಪ್ರೊ. ಫಣಿರಾಜ್

Update: 2021-08-03 17:42 GMT

ಉಡುಪಿ, ಆ.3: ಎಸೆಸೆಲ್ಸಿ ಪರೀಕ್ಷೆ ಎಂಬುದು ದಲಿತ ಹಾಗೂ ಹಿಂದುಳಿದ ಮಕ್ಕಳಿಗೆ ಸಾಕಷ್ಟು ಮಹತ್ವದ್ದಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದು ಳಿವಿಕೆ ಕುರಿತ ಜ್ಞಾನವಿಲ್ಲದ ರಾಜ್ಯ ಸರಕಾರ, ಈ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ನಡೆಸಿದೆ. ಸರಕಾರ ಇಡೀ ವರ್ಷ ಮಕ್ಕಳಿಗೆ ವೈಜ್ಞಾನಿಕವಾಗಿ ಶಿಕ್ಷಣ ನೀಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.

ಗ್ರಾಮೀಣ ರೈತ ಮಕ್ಕಳ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಗುಡ್ಡಗಾಡು ಪ್ರದೇಶಗಳ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಸಾಂಕ್ರಾಮಿಕ ರೋಗಾ ವಧಿಯ ವಿಶೇಷ ಪ್ರೋತ್ಸಾಹಾಂಕ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ದಸಂಸ ಒಕ್ಕೂಟ, ದಲಿತ ಸಂಘರ್ಷ ಸಮಿತಿಗಳ ಜಂಟಿ ವೇದಿಕೆ, ಕರ್ನಾಟಕ ರಾಜ್ಯ ಮತ್ತು ರೈತ ಸಂಘದ ನೇತೃತ್ವದಲ್ಲಿ ಉಡುಪಿ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕೇರಳ ಮಾದರಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಿ ಶಿಕ್ಷಣವನ್ನು ನೀಡಿ ಪರೀಕ್ಷೆ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಸಾಮಾಜಿಕ ಹಿಂದುಳಿವಿಕೆಯ ಜ್ಞಾನ ಇಲ್ಲದ ಸರಕಾರ ಎಲ್ಲರ ಕೈಯಲ್ಲೂ ಮೊಬೈಲ್, ಇಂಟರ್‌ನೆಟ್, ಟಿವಿ ಇರುತ್ತದೆ ಎಂದು ಭಾವಿಸಿ ಆನ್‌ಲೈನ್ ಶಿಕ್ಷಣ ನಡೆಸಿದರೆ. ಆದರೆ ಅದರ ಪರಿಣಾಮ ಏನು ಎಂಬುದರ ಬಗ್ಗೆ ಯಾವುದೇ ಅಧ್ಯಯನವನ್ನು ಸರಕಾರ ಮಾಡಿಲ್ಲ. ಅದೇ ರೀತಿ ವೈಜ್ಞಾನಿಕ ಸಮಿತಿಯನ್ನು ಕೂಡ ನೇಮಿಸದೆ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿರುವುದು ತಪ್ಪು ಎಂದರು.

ಆದುದರಿಂದ ಸರಕಾರ ಮಾಡಿರುವ ತಪ್ಪನ್ನು ಸರಿಪಡಿಸಬೇಕು. ಮಕ್ಕಳ ಭವಿಷ್ಯವನ್ನು ಯಾವುದೇ ಕಾರಣಕ್ಕೂ ಕತ್ತಲಿಗೆ ದೂಡಬಾರದು. ಮೂಲಭೂತ ಶಿಕ್ಷಣ ಸೌಲಭ್ಯ ವಂಚಿತರಾಗಿ ಉಳ್ಳವರ ಮಕ್ಕಳೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಸರಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ದಸಂಸ ಅಂಬೇಡ್ಕರ್ ವಾದ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಕರ್ನಾಟಕ ಹೊರತು ಪಡಿಸಿ ಇಡೀ ದೇಶದಲ್ಲಿ ಯಾವುದೇ ರಾಜ್ಯ ಕೂಡ ಎಸೆಸೆಲ್ಸಿ ಪರೀಕ್ಷೆಯನ್ನು ಮಾಡಿಲ್ಲ. ಯಾವುದೇ ತಯಾರಿ ಇಲ್ಲದೆ ಹಾಗೂ ಸೌಲಭ್ಯಗಳನ್ನು ಒದಗಿಸದೆ ಎಸೆಸೆಲ್ಸಿ ಪರೀಕ್ಷೆಯನ್ನು ಮಾಡಿರುವುದು ಖಂಡನೀಯ. ಆದುದರಿಂದ ಈ ಪರೀಕ್ಷೆಯನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ದಲಿತ, ಅಲ್ಪಸಂಖ್ಯಾತ, ಬಡ, ಗುಡ್ಡಗಾಡುವಿನ ಮಕ್ಕಳಿಗೆ ವಿಶೇಷವಾಗಿ ಶೇ.20 ಪ್ರೋತ್ಸಾಹಾಂಕ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಒಕ್ಕೂಟದ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಭಾಸ್ಕರ ಮಾಸ್ತರ್, ಮಂಜುನಾಥ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಅಣ್ಣಪ್ಪ ನಕ್ರೆ ಕಾರ್ಕಳ, ಶ್ರೀಧರ ಕುಂಜಿಬೆಟ್ಟು, ಶಿವಾನಂದ ಮೂಡಬೆಟ್ಟು, ಸಾಮಾಜಿಕ ಹೋರಾಟಗಾರ ಹುಸೇನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News