ಕೋವಿಡ್ ನಿಯಂತ್ರಣಕ್ಕೆ ಗ್ರಾಪಂ ಅಧ್ಯಕ್ಷರು, ಪಿಡಿಒಗಳಿಗೆ ಅಧಿಕಾರ: ದ.ಕ. ಜಿಲ್ಲಾಧಿಕಾರಿ ಆದೇಶ

Update: 2021-08-04 13:54 GMT

ಮಂಗಳೂರು, ಆ.4: ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಕೈಗೊಳ್ಳಬಹುದಾದ ಕಾರ್ಯಗಳಿಗೆ ಗ್ರಾಪಂ ಅಧ್ಯಕ್ಷರಿಗೆ ಮತ್ತು ಪಿಡಿಒಗಳಿಗೆ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಜಿಪಂ ಸಿಇಒ ಡಾ. ಕುಮಾರ್, ಜಿಲ್ಲೆಯ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಆರೋಗ್ಯಾಧಿಕಾರಿಗಳು, ಪಿಡಿಒಗಳು ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಮಾತನಾಡಿದರು.

ಗಡಿಭಾಗದಿಂದ ಜಿಲ್ಲೆಗೆ ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರಿಗೆ ಏಳು ದಿನಕ್ಕೊಮ್ಮೆ ಕಡ್ಡಾಯವಾಗಿ ಲ್ಯಾಬ್ ಟೆಕ್ನಿಷಿಯನ್‌ಗಳು ಕೋವಿಡ್ ತಪಾಸಣೆ ನಡೆಸಬೇಕು. ದ.ಕ. ಜಿಲ್ಲೆಯ ಗಡಿ ಪ್ರವೇಶಿಸುವ ಪ್ರತಿಯೊಬ್ಬರಲ್ಲಿಯೂ ಕೋವಿಡ್ ನೆಗೆಟಿವ್ ವರದಿ ಇರಬೇಕು. ಹಾಗಾಗಿ ಗ್ರಾಪಂ ಅಧ್ಯಕ್ಷರು, ಪಿಡಿಒಗಳಿಗೆ ಅಧಿಕಾರ ನೀಡಲಾಗಿದೆ. ಅದರಂತೆ ಕ್ರಮ ವಹಿಸಬೇಕು. ಜೊತೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಬೇಕು. ಸೋಂಕಿತರು ಅನಗತ್ಯವಾಗಿ ಓಡಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಒಂದೇ ಕುಟುಂಬದಲ್ಲಿ 2ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಮನೆಯನ್ನು ಮೈಕ್ರೋ ಕಂಟೈನ್‌ಮೆಂಟ್ ಝೋನ್ ಎಂದು ಪರಿಗಣಿಸಬೇಕು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್ ಟೆಕ್ನಿಷಿಯನ್‌ಗಳ ಅಗತ್ಯವಿದ್ದಲ್ಲಿ ಶೀಘ್ರವಾಗಿ ನಿಯೋಜನೆ ಮಾಡಿಕೊಳ್ಳಬಹುದು. ಅವರಿಂದ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಹೇಳಿದರು.

ಮದುವೆಗೆ 50 ಮಂದಿ ಸೀಮಿತ: ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಲ್ಲಿ ಕಲ್ಯಾಣ ಮಂಟಪಗಳ ಮಾಲಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News