ಅಕ್ಟೋಬರ್‌ನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಪ್ರೊ. ಯಡಪಡಿತ್ತಾಯ

Update: 2021-08-04 14:31 GMT

ಮಂಗಳೂರು, ಆ.4: ನಾಲ್ಕು ವರ್ಷದ ಪದವಿ ಶಿಕ್ಷಣ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯು ಅಕ್ಟೋಬರ್‌ನಿಂದ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು, ಇದು ವಿದ್ಯಾರ್ಥಿಸ್ನೇಹಿ ಹಾಗೂ ಉದ್ಯೋಗ ಪೂರಕ ಶಿಕ್ಷಣ ಕ್ರಮವಾಗಿರಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿಯ 2021-22ನೆ ಸಾಲಿನ ಪ್ರಥಮ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯಕ್ಕೆ ಇದು ಕಡ್ಡಾಯವಾಗಿರುವುದಿಲ್ಲ. ಆದರೆ, ವಿವಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಇದು ಈ ವರ್ಷದಿಂದಲೇ ಅನುಷ್ಠಾನವಾಗಲಿದೆ. ಈ ಹೊಸ ಶಿಕ್ಷಣ ನೀತಿಯಡಿ ಒಂದು ವರ್ಷದ ಪದವಿ ಸಂಪೂರ್ಣವಾದಂತೆ ಸರ್ಟಿಫಿಕೇಟ್ ಕೂಡಾ ನೀಡಲಾಗುತ್ತದೆ. ಇದು ಉದ್ಯೋಗದ ಅವಕಾಶಗಳಿಗೆ ಪೂರಕವಾಗಿರಲಿದೆ. ಬಳಿಕ ನೇರವಾಗಿ ಪಿಎಚ್‌ಡಿ ಮಾಡುವ ಸಾಧ್ಯತೆಯ ಬಗ್ಗೆಯೂ ಸದ್ಯ ಚರ್ಚೆಗಳು ನಡೆಯುತ್ತಿವೆ. ಪಿಎಚ್‌ಡಿ ಕುರಿತಂತೆ ಈ ತಿಂಗಳ ಅಂತ್ಯಕ್ಕೆ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಕಾಲೇಜುಗಳಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ

ಕೇಂದ್ರ ಸರಕಾರವು ಈ ವರ್ಷದಿಂದ 2023ರವರೆಗೆ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಅದರಂತೆ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಳಪಟ್ಟ ಎಲ್ಲಾ ಕಾಲೇಜುಗಳಲ್ಲಿ ನಡೆಸಲಾಗುವ ಕಾಲರ್ಯಕ್ರಮದಲ್ಲಿ ‘ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ’ಎಂಬ ಬ್ಯಾನರ್ ಅಳವಡಿಸಿಕೊಂಡು ಕಾರ್ಯಕ್ರಮ ನಡೆಸಲು ಸೂಚಿಸಲಾಗುತ್ತಿದೆ. ಈ ಕುರಿತಂತೆ ಪ್ರತಿ ಕಾಲೇಜುಗಳು ವರದಿಯನ್ನು ವಿವಿಗೆ ಕಳುಹಿಸಬೇಕು ಎಂದು ಪ್ರೊ. ಯಡಪಡಿತ್ತಾಯ ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೀಕರಣ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ಈಗಾಗಲೇ ಶೇ. 76ರಷ್ಟು ಪ್ರಥಮ ಡೋಸ್ ಲಸಿಕೀಕರಣ ನಡೆಸಿದೆ. ಶೇ. 100ರಷ್ಟು ಮಾಡುವಲ್ಲಿ ಎಲ್ಲಾ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಕೋವಿಡ್ ಹಿನ್ನೆಲೆ: ಆನ್‌ಲೈನ್ ಪರೀಕ್ಷೆಗೂ ವಿವಿಯಿಂದ ಸಿದ್ಧತೆ

ಆಗಸ್ಟ್ 2ರಿಂದ ಮತ್ತೆ ಆರಂಭಿಸಲಾಗಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೆಮಿಸ್ಟರ್ ಪರೀಕ್ಷೆಯನ್ನು ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿನ್ನೆ ದಿಢೀರನೆ ರದ್ದುಪಡಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವ ಕುರಿತಂತೆ ಜಿಲ್ಲಾಧಿಕಾರಿಯನ್ನು ಮನವೊಲಿಸಲಾಗುವುದು. ಈಗಾಗಲೇ ವಿಟಿಯು ಪರೀಕ್ಷೆ ನಡೆಯುತ್ತಿದೆ. ಹಾಗಿರುವಾಗ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು, ಕೇರಳದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಭೌತಿಕ ಪರೀಕ್ಷೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಪರಿಸ್ಥಿತಿ ಹೀಗೆ ಮುಂದುವರಿದು ಭೌತಿಕ ಪರೀಕ್ಷೆ ಅಸಾಧ್ಯವೆಂದಾದಲ್ಲಿ ವಿವಿ ಆನ್‌ಲೈನ್ ಪರೀಕ್ಷೆ ನಡೆಸಲೂ ಸಿದ್ಧವಿದೆ ಎಂದು ಕುಲಪತಿ ತಿಳಿಸಿದರು.

ಸಭೆಯಲ್ಲಿ ಯುಜಿಸಿ ನ್ಯಾಕ್ ಮಾರ್ಗಸೂಚಿ ಪ್ರಕಾರ ವಿಶ್ವವಿದ್ಯಾನಿಲಯದ ಐಕ್ಯುಎಸಿ ಸಮಿತಿಯನ್ನು ಪುನರ್ ರಚಿಸಲು ಅನುಮೋದನೆ ನೀಡಲಾಯಿತು. ಕುಲಸಚಿವರಾದ ಪ್ರೊ.ಪಿ.ಎಲ್. ಧರ್ಮ, ಪ್ರೊ. ಕಿಶೋರ್ ಕುಮಾರ್, ಪ್ರೊ. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

ಪದವಿಯಲ್ಲಿ ಕೊಡವ ಭಾಷಾ ಕಲಿಕೆ ಆರಂಭ

2021-22ನೆ ಸಾಲಿನಲ್ಲಿ ಪ್ರಥಮ ಪದವಿ ತರಗತಿಗಳಲ್ಲಿ ಕೊಡವ ಭಾಷೆ ವಿಷಯವನ್ನು ಐಚ್ಛಿಕ ಭಾಷೆಯಾಗಿ ಪ್ರಥಮ ಪದವಿ ತರಗತಿಗಳಲ್ಲಿ ಕಲಿಸಲು ಇಂದಿನ ಶೈಕ್ಷಣಿಕ ಸಭೆಯಲ್ಲಿ ಅನುಮೋದಿಸಲಾಯಿತು.

ಕೊಡವ ಭಾಷಾ ಪಠ್ಯಪುಸ್ತಕವನ್ನು ಮಂಗಳೂರು ವಿವಿ ಪ್ರಸಾರಾಂಗದಲ್ಲಿ ಮುದ್ರಿಸಲು ಕ್ರಮ ವಹಿಸಲಾಗಿದ್ದು, ಪಛಠ್ಯಕ್ರಮದ ಬಗ್ಗೆಯೂ ಕಲಾ ನಿಕಾಯದ ಡೀನ್‌ರ ಅಭಿಪ್ರಾಯವನ್ನು ಪಡೆದು ಅಂತಿಮಗೊಳಿಸಲಾಗಿದೆ. ಕಲಾ ನಿಕಾಯದಿಂದ ಅನುಮೋದನೆಯನ್ನು ಪಡೆದು ಕೊಡವ ಭಾಷಾ ಕಲಿಕೆ ಆರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಸಭೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News