ಜವಾಬ್ದಾರಿಯ ಸಮರ್ಪಕ ನಿರ್ವಹಣೆ: ನೂತನ ಸಚಿವ ಅಂಗಾರ

Update: 2021-08-06 15:10 GMT

ಮಂಗಳೂರು, ಆ.6: ಎರಡನೇ ಬಾರಿಗೆ ಸಚಿವನಾಗುವ ಭಾಗ್ಯವೂ ನನ್ನ ಪಾಲಿಗೆ ದೊರೆತಿದೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಸ್.ಅಂಗಾರ ಹೇಳಿದ್ದಾರೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅವರು ಪಕ್ಷದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುವವರನ್ನು ಪಕ್ಷ ಯಾವತ್ತೂ ಕೈ ಬಿಟ್ಟಿಲ್ಲ. ಯಾವುದೇ ಸ್ಥಾನಕ್ಕಾಗಿ ನಾನು ಲಾಬಿ ಮಾಡಿದವನಲ್ಲ, ಮಾಡುವುದೂ ಇಲ್ಲ. ಪಕ್ಷದ ಹಿರಿಯರು ಅವಕಾಶ ಕಲ್ಪಿಸಿದ್ದು, ಕೊಟ್ಟ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವುದು ನನ್ನ ಧರ್ಮ. ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದವರು ಹೇಳಿದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನಿಂದಾದಷ್ಟು ಕೆಲಸ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ ಎಂದು ಅಂಗಾರ ಹೇಳಿದರು.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ.ಮಾತನಾಡಿ, ಸಂಘಟನೆಯಿಂದ ಬೆಳೆದು ಬಂದ ಹಿರಿಯ ರಾಜಕಾರಣಿ ಎಸ್.ಅಂಗಾರರಿಗೆ ಅರ್ಹವಾಗಿಯೇ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. ಎರಡನೇ ಬಾರಿಗೆ ಅವರಿಗೆ ಈ ಅವಕಾಶ ಸಿಕ್ಕಿದೆ. ಜಿಲ್ಲಾ ಬಿಜೆಪಿಗೂ ಇದು ಸಂಭ್ರಮದ ದಿನ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಮಮೇಯರ್ ಸುಮಂಗಳಾ ರಾವ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸಚೇತಕ ಸುೀರ್ ಶೆಟ್ಟಿ ಕಣ್ಣೂರು, ನಿಗಮಗಳ ಅಧ್ಯಕ್ಷರಾದ ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಪ್ರಬಾರಿ ರಾಜೇಶ್ ಕಾವೇರಿ,ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News