ದ.ಕ. ಜಿಲ್ಲೆ: ರಾಜ್ಯದಲ್ಲೇ ಮೊದಲ ಬಾರಿಗೆ ಕೊರೋನ ರೂಪಾಂತರಿ 'ಈಟಾ' ಸೋಂಕು ಪತ್ತೆ

Update: 2021-08-06 15:23 GMT

ಮಂಗಳೂರು, ಆ.6: ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನ ರೂಪಾಂತರಿ ಸೋಂಕಾದ 'ಈಟಾ' ಪತ್ತೆಯಾಗಿದೆ.

ಕತರ್‌ನಿಂದ ಸುಮಾರು ನಾಲ್ಕು ತಿಂಗಳ ಹಿಂದೆಯೇ ಆಗಮಿಸಿದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದ್ದರೂ ನಂತರ ಅವರು ಗುಣಮುಖರಾಗಿ ವಾಪಸ್ ಕತರ್‌ಗೆ ಪ್ರಯಾಣ ಬೆಳೆಸಿರುವುದರಿಂದ ಜನತೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಕತರ್‌ನಿಂದ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದ ವ್ಯಕ್ತಿಯು ಮೂಡುಬಿದಿರೆ ಮೂಲದವರು. ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೊರೋನ ಸೋಂಕು ದೃಢಪಟ್ಟಿತ್ತು. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವರ ಗಂಟಲು ದ್ರವ ಮಾದರಿಯನ್ನು 'ಜಿನೋಮಿಕ್ ಸ್ಟಡಿ'ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ರೂಪಾಂತರಿ ಈಟಾ ವೈರಸ್ ಇದ್ದುದು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 150 ಮಂದಿಯನ್ನು ನಾಲ್ಕು ತಿಂಗಳ ಹಿಂದೆಯೇ ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಅವರೆಲ್ಲರೂ ಈಗಲೂ ಆರೋಗ್ಯವಾಗಿದ್ದಾರೆ. ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ಕತರ್‌ಗೆ ವಾಪಸಾಗಿದ್ದಾರೆ. ಹಾಗಾಗಿ ಆತಂಕಪಡಬೇಕಿಲ್ಲ ಎಂದು ಆರೋಗ್ಯಾಧಿಕಾರಿ ಹೇಳಿದರು.

ಇಂಗ್ಲೆಂಡ್ ಮತ್ತು ನೈಜೀರಿಯಾ ಭಾಗದಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು. ಭಾರತದಲ್ಲಿ ಮಿಝೋರಾಂ ಸೇರಿ ಕೆಲವು ಭಾಗದಲ್ಲೂ ಪತ್ತೆಯಾಗಿತ್ತು. ಇದೀಗ ಬಂದಿರುವ 'ಈಟಾ' ವರದಿಯಿಂದ ಕೋವಿಡ್ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News