ಭಟ್ಕಳದಲ್ಲಿ ಎನ್‌ಐಎ ದಾಳಿ: ಐಸಿಸ್‌ ನಂಟಿನ ಆರೋಪದಲ್ಲಿ ಓರ್ವನ ಸೆರೆ

Update: 2021-08-06 17:29 GMT

ಭಟ್ಕಳ: ಇಲ್ಲಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳವು ಭಯೋತ್ಪಾದಕ ಸಂಘಟನೆ ಐಸಿಸ್‌ ನಂಟು ಆರೋಪದಲ್ಲಿ ಓರ್ವನನ್ನು ಬಂಧಿಸಿದೆ. ಬಂಧಿತನನ್ನು ಭಟ್ಕಳ ನಿವಾಸಿ ಜುಫ್ರಿ ಜೌಹರ್‌ ದಾಮೂದಿ ಎಂದು ಗುರುತಿಸಲಾಗಿದೆ.

ಎನ್ಐಎ ನೀಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, ಜೂನ್ 29 ರಂದು ಎನ್ಐಎ ಹೊಸದಿಲ್ಲಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೌಹರ್ ನನ್ನು ಬಂಧಿಸಲಾಗಿದೆ.  "ಈ ಪ್ರಕರಣವು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ ಗೆ ಭಾರತದ ಮುಸ್ಲಿಂ ಯುವಕರನ್ನು ಭಾರತದ ವಿರುದ್ಧ ಹಿಂಸಾತ್ಮಕ ಜಿಹಾದ್ ನಡೆಸುವ ಸಲುವಾಗಿ ನೇಮಿಸಿಕೊಳ್ಳುವುದಕ್ಕೆ" ಸಂಬಂಧಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

'ಅಬು ಹಝೀರ್‌ ಅಲ್‌ ಬದ್ರಿʼ ಎಂಬ ನಾಮಧೇಯದಲ್ಲಿ ಸೈಬರ್‌ ಘಟಕದಲ್ಲಿ ಈತ ಕಾರ್ಯಾಚರಿಸುತ್ತಿದ್ದು, ವಾಯ್ಸ್‌ ಆಫ್‌ ಹಿಂದ್‌ ಅನ್ನು ದಕ್ಷಿಣ ಭಾರತದ ಭಾಷೆಗಳಿಗೆ ಭಾಷಾಂತರಿಸುವಲ್ಲಿ ಮತ್ತು ಅದನ್ನು ಪ್ರಸರಣ ಮಾಡುವುದರಲ್ಲಿ ಐಸಿಸ್‌ ನಲ್ಲಿ ಪ್ರಮುಖ ಕಾರ್ಯಕರ್ತನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ಎನ್‌ಐಎ ಹೇಳಿದೆ. ಪ್ರಸ್ತುತ ಬಂಧಿತ ಜೌಹರ್‌ ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಐಸಿಸ್‌ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದು, ಅವರೇ ಆತನಿಗೆ ನಿರ್ದೇಶನಗಳನ್ನು ನೀಡುತ್ತಿದ್ದು, ಪ್ರಚಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ ಎಂದು ಎನ್‌ಐಎ ತಿಳಿಸಿದೆ.

ಶುಕ್ರವಾರದ ಶೋಧದ ವೇಳೆ ಮೊಬೈಲ್ ಫೋನ್, ಹಾರ್ಡ್ ಡಿಸ್ಕ್, ಎಸ್ಡಿ ಕಾರ್ಡ್ ಮುಂತಾದ ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿದೆ. ಕಾರ್ಯಾಚರಣೆಯಲ್ಲಿ ಇನ್ನೂ ಇಬ್ಬರನ್ನು ಪ್ರಶ್ನಿಸಲಾಗಿತ್ತು. ಸದ್ಯ ಎನ್‌ಐಎ ತಂಡ ಭಟ್ಕಳದಲ್ಲಿದ್ದು, ಕಾರ್ಯಾಚರಣೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News