ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸಲಿ: ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಒತ್ತಾಯ

Update: 2021-08-07 13:18 GMT

ಉಡುಪಿ, ಆ.7: ಬಿಆರ್‌ಎಸ್ ಸಂಸ್ಥೆಯವರು ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ನಿರ್ವ ಹಣೆ ಮಾಡಲು ನೀಡಬಾರದು. ಅದರ ಬದಲು ಸರಕಾರವೇ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ವಹಿಸಬೇಕು ಎಂದು ಉಡುಪಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಜಿ ಅಬ್ದುಲ್ಲಾ ತಮ್ಮ ಜೀವಿತಾವಧಿಯಲ್ಲಿ ಸರಕಾರಕ್ಕೆ ದಾನವಾಗಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಜಾಗವನ್ನು 2016 ರಲ್ಲಿ ರಾಜ್ಯ ಸರಕಾರ ಖಾಸಗಿಯವರಿಗೆ ಪಿ.ಪಿ.ಪಿ. ಮಾದರಿಯಲ್ಲಿ ನೀಡಿತ್ತು. ಇದರ ವಿರುದ್ಧ ಹೋರಾಟ ಕೂಡ ಮಾಡಲಾಗಿತ್ತು ಎಂದರು. ಪ್ರಸ್ತುತ ಈ ಆಸ್ವತ್ರೆಯನ್ನು ಬಿಆರ್‌ಎಸ್‌ನವರು ತಮ್ಮಿಂದ ನಿರ್ವಹಣೆ ಮಾಡಲು ಸಾದ್ಯವಾಗುವುದಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈ ಮೊದಲೆ ನಾವು ಪಿಪಿಪಿ ಮಾದರಿಯ ಆಸ್ಪತ್ರೆಗಳು ಜನರಿಗೆ ಸೇವೆ ನೀಡಲು ವಿಫಲವಾಗಿರುವುದರ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ನೀಡಿ ಎಚ್ಚರಿಸಿದ್ದೆವು. ಅದರೂ ಆಗಿನ ಸರಕಾರ ತಾರತುರಿಯಲ್ಲಿ ಮುಂದಾಲೋಚನೆ ಇಲ್ಲದೆ ನೀಡಿದರ ಫಲವಾಗಿ ಇಂದು 200 ಹಾಸಿಗೆಯ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯನ್ನು ಸರಕಾರ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬಹುದು ಎಂಬ ಅತಂಕ ಉಡುಪಿ ಜನತೆಯಲ್ಲಿ ಮನೆ ಮಾಡಿದೆ ಎಂದು ಅವರು ತಿಳಿಸಿದರು.

ಉಡುಪಿಯ ಹೃದಯ ಭಾಗದಲ್ಲಿರುವ ಹಾಜಿ ಬುಡನ್ ಶುಶ್ರೂಷಾಲಯ ಮೊದಲಿನಂತೆ ಕಾರ್ಯ ನಿರ್ವಹಿಸಬೇಕು. ಸ್ಥಳೀಯಾಡಳಿತವು ಹಾಜಿ ಬುಡನ್ ಶುಶ್ರೂಷಾಲಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದೆ. ಜಾಗ ಮತ್ತು ಕಟ್ಟಡ ವನ್ನು ನೀಡಿದ ದಾನಿಗಳಿಗೆ ಕನಿಷ್ಠ ಕೃತಜ್ಞಾ ಪೂರ್ವಕವಾಗಿಯಾದರೂ ಅಲ್ಲಿನ ನಾಮಫಲಕ್ಕೆ ಬಣ್ಣವನ್ನು ನೀಡಿ ಶುಶ್ರೂಷಾಲಯನ್ನು ಮೊದಲಿನಂತೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಸೈಯ್ಯದ್ ಸಿರಾಜ್ ಅಹ್ಮದ್ ಮಾತನಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಬಾರದು, ಕಟ್ಟಡ ಸ್ಥಳಾಂತರ ಮಾಡಬಾರದು ಮತ್ತು ತನ್ನ ಹಾಗೂ ಹಾಜಿ ಬುಡನ್ ಅವರ ಹೆಸರು ಅಜರಾಮರವಾಗಿರಬೇಕು ಎಂಬುದು ಹಾಜಿ ಅಬ್ದುಲ್ಲಾರ ಆಶಯವಾಗಿತ್ತು. ಆದುದರಿಂದ ಆಸ್ಪತ್ರೆ ನಿರ್ವಹಿಸಲು ಸಮರ್ಥವಾಗಿರುವ ರಾಜ್ಯ ಸರಕಾರ ಇದನ್ನು ಮುನ್ನಡೆಸಬೇಕು. ಆ ಮೂಲಕ ಅವರ ಆಶಯವನ್ನು ಉಳಿಸಬೇಕು. ಆಸ್ಪತ್ರೆಯನ್ನು ಖಾಸಗಿ ಕೊಡದೆ ಸರಕಾರವೇ ನಡೆಸಿ ಬಡವರಿಗೆ ಸೇವೆ ನೀಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧಿಕಾರಿ ಎಂ.ಇಕ್ಬಾಲ್ ಮನ್ನಾ, ಟ್ರಸ್ಟಿ ಹುಸೈನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

12ರಂದು ಹಾಜಿ ಅಬ್ದುಲ್ಲಾರ ಸ್ಮರಣಾರ್ಥ ಕಾರ್ಯಕ್ರಮಆ.12ರಂದು ದಾನಿ ಹಾಜಿ ಅಬ್ದುಲ್ಲಾ ಮರಣ ಹೊಂದಿದ ದಿನ. ಈ ಬಾರಿ ಹಾಜಿ ಅಬ್ದುಲ್ಲಾರವರ ಸ್ಮರಣಾರ್ಥ ಆ.12ರಂದು ಟ್ರಸ್ಟ್ ವತಿಯಿಂದ ಉಡುಪಿಯ ಆಯ್ದ ಭಾಗಗಳಲ್ಲಿ ಗಿಡಗಳನ್ನು ನೆಡುವ ಹಾಗೂ ಬ್ರಹ್ಮಗಿರಿಯ ಹಿರಿಯ ನಾಗರಿಕರ ಆಶ್ರಯ ತಾಣದಲ್ಲಿ ಹಿರಿಯ ನಾಗರಿಕರಿಗೆ ಊಟ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಕೆಲವು ಸ್ವಯಂ ಪ್ರೇರಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನವನ್ನು ಕೂಡ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News