'2023ರ ಅಂತ್ಯದೊಳಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಪ್ರಯತ್ನ'

Update: 2021-08-08 14:16 GMT

ಬ್ರಹ್ಮಾವರ, ಆ.8: ಸಕ್ಕರೆ ಉತ್ಪಾದನೆ ಮತ್ತು ಎಥೆನಾಲ್ ಘಟಕದೊಂದಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣಕ್ಕೆ ಈಗಾಗಲೇ ಪೂರಕ ತಯಾರಿಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನೆರವೇರಿದರೆ 2023ರ ಅಂತ್ಯದೊಳಗೆ ಕಾರ್ಖಾನೆ ಪುನಾರಂಭಗೊಳ್ಳಲಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಕ್ಕರೆ ಕಾರ್ಖಾನೆಯ ಅಳವು-ಉಳಿವಿನ ಸಾಧ್ಯತೆಗಳ ಕುರಿತು ಚಚಿಸುವ ನಿಟ್ಟಿನಲ್ಲಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಆ.7ರಂದು ಬ್ರಹ್ಮಾವರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಹಮಿಕೊಳ್ಳಲಾದ ಮಾಧ್ಯಮ ಸಂವಾದಲ್ಲಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ 152 ಸಂಸ್ಥೆಗಳು ಎಥೆನಾಲ್ ಘಟಕ ಸ್ಥಾಪನೆಗೆ ಹೆಸರು ನೊಂದಾ ಯಿಸಿಕೊಂಡಿದ್ದು ಇದರಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಒಂದು. ಎಥೆನಾಲ್ ಘಟಕ ಸ್ಥಾಪನೆಗೆ ಸರಕಾರದಿಂದ ದೊಡ್ಡ ಮಟ್ಟದ ಸಹಕಾರ ದೊರೆಯುತ್ತದೆ. ಎಥೆನಾಲ್ ಘಟಕ ಆರಂಭಿಸಲು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡಬೇಕು ಎಂಬ ಕೇಂದ್ರ ಸರಕಾರದ ನಿಯಮವಿದೆ. ಘಟಕಕ್ಕೆ ಅಗತ್ಯವಿರುವ ಜಾಗ ಹಾಗೂ ಮೂಲಸೌರ್ಯಾಗಳು ನಮ್ಮಲ್ಲಿ ಇದೆ ಎಂದರು.

ಕಾರ್ಖಾನೆಗೆ 150 ಕೋಟಿ ರೂ. ಅಗತ್ಯ

ಹೊಸ ಕಾರ್ಖಾನೆ ನಿರ್ಮಿಸಲು 150ಕೋಟಿ ರೂ ಅಗತ್ಯ ಇದ್ದು, ಕಾರ್ಖಾನೆಯ ಈಗಿರುವ ಯಂತ್ರೋಪಕರಣ ಸಂಪೂರ್ಣ ಗುಜರಿಗೆ ಹಾಕು ವುದರಿಂದ 4-5ಕೋಟಿ ಆದಾಯ ಬರಲಿದೆ. ಉದ್ಯಮಿಗಳಿಂದ ಷೇರು ಹೂಡಿಕೆಯ ಮೂಲಕ ಆರ್ಥಿಕ ನೆರವು ಪಡೆಯಲು ಎಲ್ಲಾ ತಯಾರಿ ನಡೆದಿದೆ. ಈ ಆದಾಯವನ್ನೆಲ್ಲ ಬಳಸಿಕೊಂಡು ಕಾರ್ಖಾನೆ ಪುನರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಬಡ್ಡಿ ಮೊತ್ತ ಸೇರಿ ಸದ್ಯ ಕಾರ್ಖಾನೆಗೆ ಸಂಬಂಧಿಸಿ 85ಕೋಟಿ ರೂ. ಸಾಲ ಇದೆ. ಈ ವಿಚಾರವಾಗಿ ಕೆಲವೊಂದು ಸಂಸ್ಥೆಗಳೊಂದಿಗೆ ಕಾನೂನು ಹೋರಾಟ ಚಾಲ್ತಿಯಲ್ಲಿದೆ ಹಾಗೂ ಸ್ಥಳೀಯ ಸಹಕಾರಿ ಸಂಘಗಳಲ್ಲಿ ಸೌರ್ಹಾದಯುತವಾಗಿ ಮಾತುಕತೆ ನಡೆಸಿ ರಿಯಾಯಿತಿಯೊಂದಿಗೆ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ನೆಯುತ್ತಿದೆ ಎಂದು ಅವರು ತಿಳಿಸಿದರು.

ಕಬ್ಬು ಬೆಳೆಸಿ ಅಭಿಯಾನ

ಕಾರ್ಖಾನೆ ಆರಂಭಿಸಿದರೆ 2ಸಾವಿರ ಮಂದಿ ರೈತರು ಕಬ್ಬು ಬೆಳೆಯುವುದಾಗಿ ಈಗಾಗಲೇ ಭರವಸೆ ಪತ್ರ ನೀಡಿದ್ದಾರೆ. ವಾರಾಹಿ ನೀರಾವರಿ ಪ್ರದೇಶದಲ್ಲೇ 10ಸಾವಿರ ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಅವಕಾಶವಿದೆ. ಆದ್ದರಿಂದ ಕಾರ್ಖಾನೆ ಆರಂಭವಾದರೆ ಕಬ್ಬು ಕೊರೆತ ಆಗುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಕಬ್ಬು ಬೆಳೆಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ಮೂಲಕ 1500ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಉದ್ಘಾಟಿಸಿದರು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಉಮಾನಾಥ ಶೆಟ್ಟಿ, ನಿರ್ದೇಶಕ ಆಸ್ತಿಕ್ ಶಾಸ್ತ್ರಿ, ಸಂತೋಷ್ ಶೆಟ್ಟಿ ಬಾಲಾಡಿ, ಸನ್ಮತ್ ಹೆಗ್ಡೆ, ಸುಬ್ಬ ಬಿಲ್ಲವ, ರತ್ನಾಕರ ಗಾಣಿಗ, ಕಾರ್ಖಾನೆಯ ಮ್ಯಾನೇಜರ್ ಗೋಪಾಲಕೃಷ್ಣ, ಕಾನೂನು ಸಲಹೆಗಾರ ವಿಜಯ ಹೆಗ್ಡೆ, ಉದ್ಯಮಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿದರು. ವಸಂತ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಘದ ಖಜಾಂಚಿ ಮೋಹನ್ ಉಡುಪ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಒಂದಿಂಚ್ಚು ಜಾಗ ಮಾರಲ್ಲ

ಕಾರ್ಖಾನೆಗೆ ಸಂಬಂಧಿಸಿದ ಒಂದಿಂಚ್ಚು ಜಾಗವನ್ನು ಕೂಡ ಮಾರಾಟ ಮಾಡುವುದಿಲ್ಲ. ಸಕ್ಕರೆ ಉತ್ಪಾದನೆ, ಎಥೆನಾಲ್ ಉತ್ಪಾದನೆಯ ಜೊತೆಗೆ ಬೆಲ್ಲದ ಆಲೆಮನೆ, ಗಾಣದ ತೆಂಗಿನ ಎಣ್ಣೆ ಉತ್ಪಾದನೆ, ಭತ್ತ ಖರೀದಿ, ಭತ್ತದ ಮಿಲ್, ವಾಣಿಜ್ಯ ಸಂಕೀರ್ಣ ನಿರ್ಮಾಣ, ಹಿಟ್ಟು ತಯಾರಿಕೆ ಘಟಕ, ಗೋಡಾಮು ನಿರ್ಮಾಣ ಸೇರಿದಂತೆ ರೈತರಿಗೆ ಪೂರಕವಾದ ವಿವಿಧ ಯೋಜನೆಗಳನ್ನು ಇಲ್ಲಿ ರೂಪಿಸಲಿದ್ದೇವೆ ಎಂದು ಸುಪ್ರಸಾದ್ ಶೆಟ್ಟಿ ತಿಳಿಸಿದರು.

ಕಾರ್ಖಾನೆಯಲ್ಲಿ ಎರಡು ತಿಂಗಳು ಕಾರ್ಯಾಚರಿಸಲ್ಪಟ್ಟ ಆಲೆಮನೆಯಿಂದ 1.80ಲಕ್ಷ ಲಾಭ ಬಂದಿದೆ. ಹೀಗಾಗಿ ಮುಂದೆ ದೊಡ್ಡಮಟ್ಟದಲ್ಲಿ ಬೆಲ್ಲದ ಘಟಕ ಅಳವಡಿಸಲಾಗುವುದು. ಕಾರ್ಖಾನೆ ಆರಂಭವಾಗುವ ತನಕ ರೈತರ ಕಬ್ಬನ್ನು ನಿರಂತರ ಬೆಲ್ಲ ತಯಾರಿಗೆ ಬಳಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News