ಸೇತುವೆಗಳಿಗೆ ತಂತಿಜಾಲದ ಬೇಲಿ ಅಳವಡಿಸಲು ಆಗ್ರಹ

Update: 2021-08-10 14:41 GMT

ಉಡುಪಿ, ಆ.10: ಉಡುಪಿ ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯಿಂದ ಬೈಂದೂರು ಶಿರೂರುವರೆಗೆ ಸಿಗುವ ನದಿಗಳ ಸೇತುವೆಯ ಎರಡು ದಿಕ್ಕಿನ ತಡೆಗೊಡೆಗಳಿಗೆ ತಂತಿಜಾಲದ ಬೇಲಿಯನ್ನು ಅಳವಡಿಸುವ ಮೂಲಕ ನದಿ ಮಾಲಿನ್ಯವನ್ನು ತಡೆಯ ಬೇಕೆಂದು ಸಾಮಾಜಿಕ ಕಾರ್ಯಕರ್ತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಸೇತುವೆಯಲ್ಲಿ ಕಸ ತ್ಯಾಜ್ಯ ಎಸೆಯ ಬಾರದು ಎನ್ನುವ ಸೂಚನೆ ಫಲಕಗಳನ್ನು ಅಲ್ಲಿಯ ಆಡಳಿತ ವ್ಯವಸ್ಥೆಗಳು ಅಳವಡಿಸಿದರೂ, ತಾಜ್ಯ ಎಸೆಯುವ ಕೃತ್ಯಗಳು ನಡೆಯುತ್ತಲೇ ಇವೆ. ಸಾರ್ವಜನಿಕರು ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತಾಜ್ಯಗಳನ್ನು ಚೀಲದಲ್ಲಿ ತಂದು ಎಸೆಯುತ್ತಿರುವುದು ಕಂಡು ಬರುತ್ತಿದೆ. ಸೇತುವೆ ಮೇಲಿನ ಸ್ಥಳದಲ್ಲಿ ಕಸ ತ್ಯಾಜ್ಯಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಎಂದು ಅವರು ದೂರಿದ್ದಾರೆ.

ಮನೆಯಿಂದ ಕೆಲಸ ಕಾರ್ಯಗಳಿಗೆ ಬೈಕು ಕಾರಿನಲ್ಲಿ ತೆರಳುವ ಕೆಲವರಿಂದ ಬಹಳವಾಗಿ ತ್ಯಾಜ್ಯ ಎಸೆಯುವ ಕೃತ್ಯಗಳು ನಡೆಯುತ್ತಿವೆ. ಇವರ ಕೃತ್ಯದಿಂದ ಜಲ ಮೂಲಗಳು ಮಾಲಿನ್ಯವುಗೊಳ್ಳುತ್ತಿವೆ. ಜಲಚರಗಳು ರಾಸಾಯನಿಕ, ವಿಷಹಾರ ಸೇವಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಅಲ್ಲದೆ ಚುಚ್ಚು ಮದ್ದಿನ ಪರಿಕರಗಳು, ಕೋಳಿ ಅಂಗಡಿಯ ತ್ಯಾಜ್ಯಗಳನ್ನು ಎಸೆಯಲಾಗುತ್ತದೆ. ತಿನ್ನಲು ಬರುವ ಗಿಡುಗ ಬೀದಿನಾಯಿಗಳು ಅಪಘಾತಗೊಂಡು ಸಾವುಕಾಣುತ್ತಿವೆ.

ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಥವಾ ಸಂಬಂಧಪಟ್ಟ ಇಲಾಖೆಗಳು, ಸೇತುವೆಗಳ ಎರಡು ದಿಕ್ಕಿನ ತಡೆಗೊಡೆಯ ಮೇಲೆ ತಂತಿಜಾಲದ ಬೇಲಿಯನ್ನು ಅಳವಡಿಸಿದರೆ, ನದಿ ಮಾಲಿನ್ಯವನ್ನು ತಡೆಯೊಡ್ಡಲು ಸಾಧ್ಯವಿದೆ. ಅಲ್ಲದೆ ನದಿಗಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಕೃತ್ಯಗಳು ನಡೆಯದಂತೆ ತಡೆಯೊಡ್ಡಲು ಸಹಕಾರವಾಗುತ್ತದೆ. ಈಗಾಗಲೇ ತಂತಿಬಲೆ ಬೇಲಿಯ ಅಳವಡಿಕೆ ಪ್ರಯೋಗ ಮಂಗಳೂರನಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸೇತುವೆ ಗಳಿಗೆ ತಂತಿಜಾಲದ ಬೇಲಿಯನ್ನು ಅಳವಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News