ಕುದ್ಮುಲ್ ರಂಗರಾವ್ ಹೆಸರಿನಲ್ಲಿ ಯೋಜನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2021-08-10 17:26 GMT

ಮಂಗಳೂರು, ಆ.10: ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತ ಶ್ರಮಿಸಿದ ಕುದ್ಮುಲ್ ರಂಗರಾವ್ ಅವರ ಹೆಸರಿನಲ್ಲಿ ಉತ್ತಮ ಯೋಜನೆಯೊಂದನ್ನು ಜಿಲ್ಲೆಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವುದಾಗಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಇಂದು ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕುದ್ಮುಲ್ ರಂಗರಾವ್ ಅವರ ಭಾವನೆಗಳು, ಯೋಚನೆಗಳನ್ನು ಗಮನದಲ್ಲಿರಿಸಿ, ಪ್ರಮುಖರೊಂದಿಗೆ ಯೋಜನೆಯನ್ನು ಅಂತಿಮಗೊಳಿಸಿ, ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ಎಂದು ಸಚಿವ ಕೋಟ ಈ ಸಂದರ್ಭ ತಿಳಿಸಿದರು.

ಇಲಾಖೆಯಲ್ಲಿ ಅನಗತ್ಯ ಖರ್ಚನ್ನು ಕಡಿಮೆ ಮಾಡಿ, ಪರಿಶಿಷ್ಟ ಜಾತಿಯವರಿಗೆ ಹಕ್ಕುಪತ್ರ, ವಿದ್ಯುತ್,ಆರೋಗ್ಯ, ಶೌಚಗೃಹ, ಮಕ್ಕಳ ವಿದ್ಯಾಭಾಸಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಹೆಚ್ಚು ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕರೆತರುವ ದೊಡ್ಡ ಜವಾಬ್ದಾರಿ ಇಲಾಖೆಗಿದೆ. ಮುಖ್ಯಮಂತ್ರಿ ಅಂತಹ ಕಾರ್ಯವನ್ನು ನನ್ನ ಹೆಗಲಿಗೆ ವಹಿಸಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತಾನಾಡಿ, ಯುವ ಕರಿಗೆ ನಿತ್ಯ ನಿರಂತರವಾಗಿ ಮಾರ್ಗದರ್ಶನ ನೀಡುವಲ್ಲಿ ಕೋಟ ಮೊದಲಿಗರು ಎಂದರು.

ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಕೋಟ ಅವರು ಈಗಾಗಲೇ ಸಚಿವರಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದು, ಸರಳತೆ, ಪ್ರಾಮಾಣಿಕ ಕೆಲಸವನ್ನು ಸಮಾಜ ಗುರುತಿಸುತ್ತದೆ ಎನ್ನುವುದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಉದಾಹರಣೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ರಾಜೇಶ್ ಕಾವೇರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಪ್ರಮುಖರಾದ ಮೋನಪ್ಪ ಭಂಡಾರಿ, ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

ಕಸ್ತೂರಿ ಪಂಜ ಕಾರ್ಯಕ್ರಮ ನಿರೂಪಿಸಿದರು. ರಾಮದಾಸ್ ಬಂಟ್ವಾಳ ವಂದಿಸಿದರು.

ಪರಿಶಿಷ್ಟ ಜಾತಿಯವರ ಮನೆ ನಿವೇಶನಕ್ಕೆ ಹಕ್ಕುಪತ್ರ 

ಪರಿಶಿಷ್ಟ ಜಾತಿಯತಾವು ವಾಸಿಸುತ್ತಿರುವ ಮನೆ ನಿವೇಶನಕ್ಕೆ ಹಕ್ಕುಪತ್ರದಿಂದ ವಂಚಿತರಾಗಿರುವ ಪರಿಶಿಷ್ಟ ಜಾತಿಯ ಅರ್ಹರಿಗೆ ಹಕ್ಕುಪತ್ರ ವಿತರಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸೋಮವಾರ ಸಭೆ ನಡೆಸಿ ಆದೇಶ ಹೊರಡಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯದಲ್ಲಿ 1.27 ಕೋಟಿ ಪರಿಶಿಷ್ಟ ಜಾತಿಯವರಿದ್ದು, 25 ಲಕ್ಷ ಕುಟುಂಬಗಳಿವೆ. ಪ್ರಸ್ತುತ ಯಾರೆಲ್ಲ ಹಕ್ಕುಪತ್ರದಿಂದ ವಂಚಿತರಾಗಿದ್ದರೋ ಅಂತಹವರು ವಾಸವಿರುವ ಸರ್ಕಾರಿ ಅಥವಾ ಖಾಸಗಿ ಜಾಗವೇ ಆಗಿದ್ದರೂ ಅವರಿಗೆ ಹಕ್ಕುಪತ್ರ ವಿತರಿಸಲು ಚಿಂತನೆ ನಡೆಸಲಾಗಿದೆ. ಖಾಸಗಿ ಜಾಗದಲ್ಲಿ ವಾಸವಾಗಿರು ವವರಿಗೆ ಜಿಲ್ಲಾಧಿಕಾರಿಗಳು ಮೂಲಕ ಪರಿಶೀಲಿಸಿ, ಹಕ್ಕು ಪತ್ರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News