ಕೂರಾಡಿ ಸದಾಶಿವ ಕಲ್ಕೂರ ನಿಧನ

Update: 2021-08-11 14:12 GMT

ಉಡುಪಿ, ಆ.11: ನಿವೃತ್ತ ಶಿಕ್ಷಕ, ತಾಳಮದ್ದಲೆ ಅರ್ಥಧಾರಿ, ಚಿಂತಕ ಕೂರಾಡಿ ಸದಾಶಿವ ಕಲ್ಕೂರ (86) ಮಂಗಳವಾರ ರಾತ್ರಿ ಅಲೆವೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು.

ಮೂರುವರೆ ದಶಕಗಳ ಕಾಲ ವಿವಿಧ ಕಡೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಬಳಿಕ ಉಪ್ಪೂರಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ‘ಬಿತ್ತಿದಂತೆ ಬೆಳೆ’ ಎಂಬ ಯಕ್ಷಗಾನ ಹಾಗೂ ಸಾಮಾಜಿಕ ಸ್ಥಿತಿ ಗತಿಗಳ ಕುರಿತಾದ ಅಮೂಲ್ಯ ಬರಹಗಳನ್ನೊಳಗೊಂಡ ಪುಸ್ತಕವನ್ನು ಪ್ರಕಟಿಸಿದ್ದಾರೆ. ಶಿವರಾಮ ಕಾರಂತ, ಬೈಕಾಡಿ ವೆಂಕಟಕೃಷ್ಣ ರಾವ್, ಗೋಪಾಲಕೃಷ್ಣ ಅಡಿಗ ಸೇರಿದಂತೆ ಕನ್ನಡದ ಹಲವು ಸಾಹಿತಿ ಗಳೊಂದಿಗೆ ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಪ್ರತಿಪಾದಿಸುತ್ತಾ ಬಂದಂತ ಧೀಮಂತ ವ್ಯಕ್ತಿಯಾಗಿದ್ದರು.

ಬಡಗುತಿಟ್ಟಿನ ಹಾರಾಡಿ ಮತ್ತು ಮಟಪಾಡಿ ಶೈಲಿಯ ಹಿರಿಯ ಕಲಾವಿದರ ಅನನ್ಯತೆಯ ಬಗ್ಗೆ ಸೋದಾಹರಣವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದ ಸದಾಶಿವ ಕಲ್ಕೂರ, ಕೂರಾಡಿಯಲ್ಲಿ ‘ಸಂಸ್ಕತಿ ಸಂಘ’ವನ್ನು ಕಟ್ಟಿ ಗ್ರಾಮೀಣ ಭಾಗಕ್ಕೆ ನಾಡಿನ ಶ್ರೇಷ್ಠ ಸಾಹಿತಿಗಳನ್ನು ಕರೆಸಿ ಅವರ ವಿಚಾರಗಳನ್ನು ಜನರಿಗೆ ತಲುಪಿಸುತ್ತಾ ಕನ್ನಡದ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು.

ತಾಳಮದ್ದಲೆಯ ಅರ್ಥಧಾರಿಯಾಗಿ ಕಲಾ ಸೇವೆಗೈದ ಇವರನ್ನು ಯಕ್ಷಗಾನ ಕಲಾರಂಗ, ಅಂಬಲಪಾಡಿ ಯಕ್ಷಗಾನ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳು ಗೌರವಿಸಿದ್ದವು. ಕೂರಾಡಿ ಸದಾಶಿವ ಕಲ್ಕೂರ ಅವರು ಮೂವರು ಪುತ್ರರು, ಇಬ್ಬರು ಪುತ್ರಿ ಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News