ಮಂಗಳೂರು : ಮನೆಯಲ್ಲಿರುವ ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲು ಸಿಎಂ ಸೂಚನೆ

Update: 2021-08-12 08:42 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಸಬೇಕು. ಅದಕ್ಕಾಗಿ ಮನೆಯಲ್ಲಿರುವ ಕೋವಿಡ್ ಸೋಂಕಿತರನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ ವಾರದೊಳಗೆ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ದ.ಕ. ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಎರಡನೇ ಅಲೆಯನ್ನು ಜಿಲ್ಲೆ ಚೆನ್ನಾಗಿ ನಿಭಾಯಿಸಿದೆ. ಆದರೆ, ಒಂದು ತಿಂಗಳಿನಿಂದ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಸಕ್ರಿಯ ಪ್ರಕರಣಗಳಲ್ಲಿ ಶೇ.90 ಮಂದಿ ಮನೆಯಲ್ಲೇ ಇದ್ದಾರೆ. ಇದು ಸೋಂಕು ಹರಡಲು ಕಾರಣವಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಿ ಎಂದರು.

ಮನೆಯಲ್ಲಿರುವ ಸೋಂಕಿತರ ಬಗ್ಗೆ ದಿನಕ್ಕೆ ಎರಡು ಬಾರಿ ತಪಾಸಣೆ ನಡೆಸಬೇಕು. ಅವರು ಸಿಸಿಸಿಗೆ ಹೋಗಬೇಕೋ, ಆಸ್ಪತ್ರೆಗೆ ಹೋಗ ಬೇಕೋ ಎಂಬುದನ್ನು ವೈದ್ಯರು ನಿರ್ಧರಿಸಬೇಕು. ಗ್ರಾಮ ಮಟ್ಟದಲ್ಲಿ ಸೋಂಕಿತರಿಗೆ ಪಿಡಿಒಗಳು ಮನವರಿಕೆ ಮಾಡಿಸಿ, ಸಿಸಿಸಿಗೆ ಕಳುಹಿಸ ಬೇಕು. ಕೋವಿಡ್ ಸೆಂಟರ್‌ನಲ್ಲಿ ವೈದ್ಯರು,‌ ನರ್ಸ್‌ಗಳು, ಔಷಧ, ಆಕ್ಸಿಜನ್ ಸಹಿತ ಎಲ್ಲ ವೈದ್ಯಕೀಯ ಸೌಲಭ್ಯ ಇರಬೇಕು ಎಂದರು.

ಮಂಗಳೂರಿನಲ್ಲಿ ಎಂಟು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ದೊಡ್ಡ ಉದ್ಯಮ, ಮೀನುಗಾರಿಕೆ, ಪಕ್ಕದಲ್ಲಿ ಕೇರಳ ಗಡಿ ಇದೆ. ಎಲ್ಲ ಸವಾಲುಗಳ ಮಧ್ಯೆ ಕೆಲಸ ಮಾಡಿ. ಇಲ್ಲದಿದ್ದರೆ ಲಾಕ್‌ಡೌನ್ ಮಾಡಿದರೆ ಎಲ್ಲರಿಗೂ ಸಮಸ್ಯೆಯಾಗಲಿದೆ ಎಂದು ಸಿಎಂ ಎಚ್ಚರಿಸಿದರು.

ಸಂಭಾವ್ಯ ಕೋವಿಡ್ ಮೂರನೇ ಅಲೆ ನಿಯಂತ್ರಿಸಲು ಎಲ್ಲ ತಾಲೂಕಿನಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲು ಅವರು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News