ಕಾಟಾಚಾರಕ್ಕೆ ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮ: ಆರೋಪ

Update: 2021-08-12 10:40 GMT

ಮಂಗಳೂರು, ಆ.12: ದಲಿತ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ನಗರದ ಉರ್ವಸ್ಟೋರ್ ಬಳಿ ನಿರ್ಮಾಣಗೊಂಡ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಉದ್ಘಾಟನೆ ಕಾಟಾಚಾರಕ್ಕೆಂಬಂತೆ ನಡೆದಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ದಲಿತ ಸಂಘಟನೆಗಳು ಭವನದಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಉದ್ಘಾಟನೆ ಮುಗಿಸಿ ಮುಖ್ಯಮಂತ್ರಿಗಳು ತೆರಳಿದ ಬಳಿಕ ದಲಿತ ಸಂಘಟನೆಗಳ ಮುಖಂಡರು ಭವನದಲ್ಲಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭ ಮಾತನಾಡಿದ ದಲಿತ ಮುಖಂಡ ಅಶೋಕ್ ಕೊಂಚಾಡಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿಗಳು ಒಂದು ಮಾತನ್ನು ಆಡದೆ ತೆರಳಿದ್ದಾರೆ. ದೀಪ ಬೆಳಗಿಸಲು ಮಾತ್ರ ಕಾರ್ಯಕ್ರಮ ಆಯೋಜಿಸಿದಂತಿತ್ತು. ಇದು ಕೇವಲ ಕಾಟಾಚಾರಕ್ಕೆ ನಡೆದಿದ್ದು, ನಮಗೆ ಅವಮಾನ ಮಾಡಲಾಗಿದೆ ಎಂದರು.

ಸಭೆ ಆರಂಭವಾಗುತ್ತದೆ ಎಂದು ನಾವು ಕಾದು ಕುಳಿತಿದ್ದೆವು. ಆದರೆ ಉದ್ಘಾಟನೆ ಮುಗಿಸಿ ಮುಖ್ಯಮಂತ್ರಿಗಳೊಂದಿಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರೂ ತೆರಳಿದ್ದಾರೆ. ಒಂದು ನಿಮಿಷದಲ್ಲಿ ಕಾರ್ಯಕ್ರಮ ಮುಗಿದು ಹೋಗಿದೆ. ಇಂತಹ ಅವಮಾನವನ್ನು ಸಹಿಸಲಾಗದು. ಈ ರೀತಿಯ ನಿರ್ಲಕ್ಷ್ಯವನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮತ್ತು ಸಮಾಜ ಕಲ್ಯಾಣ ಕಚೇರಿ ಮುಂಭಾಗ ಶೀಘ್ರವೇ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅಶೋಕ್ ಕೊಂಚಾಡಿ ತಿಳಿಸಿದರು.

ಭವನ ನಿರ್ಮಾಣ ಆಗಿದ್ದರೂ ಇದರ ಉದ್ಘಾಟನೆ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಮುಖ್ಯಮಂತ್ರಿಗಳ ಕೈಯಿಂದ ಉದ್ಘಾಟಿಸುವುದಾಗಿ ತಿಳಿಸಿದ್ದರು. ಸಣ್ಣ ಪುಟ್ಟ ಕಾರ್ಯಕ್ರಮವನ್ನು ವೈಭವದಿಂದ ಮಾಡುವ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ಔಪಚಾರಿಕ ಕಾರ್ಯಕ್ರಮವಾಗಿ ಮುಗಿಸಿ ಅವಮಾನ ಮಾಡಿದೆ. ಕೋವಿಡ್ ಕಾರಣದಿಂದ ಕಾರ್ಯಕ್ರಮ ಮಾಡುತ್ತಿಲ್ಲ. ಭವನದ ಸದುಪಯೋಗ ಎಲ್ಲರಿಗೂ ದೊರೆಯಲಿ ಎಂಬ ಒಂದು ಮಾತನ್ನಾದರೂ ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿಗಳು ಹೇಳಬಹುದಿತ್ತು ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಘಟನೆಯ ರಾಜ್ಯ ಸಂಚಾಲಕ ದೇವದಾಸ್ ಮಾತನಾಡಿ, ಇದು ಕಾರ್ಯಕ್ರಮವೇ ಅಲ್ಲ, ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳು ಒಂದು ಮಾತು ಆಡಬಹುದಿತ್ತು. ಬಂದ ಹಾಗೇ ಹೋಗಿಬಿಟ್ಟರು. ಸಾಕಷ್ಟು ಜನ ಸೇರಿದ್ದರೂ ಕ್ಯಾರೇ ಮಾಡದೆ ತೆರಲಿದ್ದಾರೆ. ಈ ಕೋಮುವಾದಿ ಸರಕಾರಕ್ಕೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News