ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Update: 2021-08-12 15:21 GMT
ಬಸವರಾಜ ಬೊಮ್ಮಾಯಿ

ಉಡುಪಿ, ಆ.12: ಸರಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಛ ಹಾರ ತುರಾಯಿ ಬದಲು ಪುಸ್ತಕ ನೀಡಲು ಆದೇಶ ಹೊರಡಿಸಿರುವುದು ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದಲ್ಲ. ಖಾಸಗಿಯಾಗಿ ಅವರು ಹೂವಿನ ವ್ಯಾಪಾರವನ್ನು ಮಾಡಬಹುದು. ಸರಕಾರಿ ಕಾರ್ಯಕ್ರಮದಲ್ಲಿ ಮಾತ್ರ ಇದೆಲ್ಲ ಬೇಡ ಎಂದು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರ ಗೌರವ ವಂದನೆಯನ್ನು ಸಾರ್ವಜನಿಕ ಸ್ಥಳದಲ್ಲಿ ನಡೆಸುವುದನ್ನು ನಿಲ್ಲಿಸಲು ತೀರ್ಮಾನ ಮಾಡಿದ್ದೇನೆ. ಕೇವಲ ಪೊಲೀಸ್ ಸಮಾರಂಭದಲ್ಲಿ ಮಾತ್ರ ಗೌರವ ವಂದನೆ ನೀಡಿದರೆ ಸಾಕಾಗುತ್ತದೆ. ಈ ಬಗ್ಗೆ ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸಲಾಗುವುದು ಎಂದರು.

ವೈಯಕ್ತಿಕವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಭ ಕೋರುವ ಕಟೌಟ್ ಹೋರ್ಡಿಂಗ್ ಹಾಕಬಾರದು. ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕನಾಗಿದ್ದೇನೆ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದು ಅವರು ಹೇಳಿದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ ವಿಚಾರದ ಕುರಿತ ಪ್ರಶ್ನೆಗೆ, ನಾನು ಯಾವುದೇ ಮ್ಯಾಜಿಕ್‌ ಮಾಡುತ್ತಿಲ್ಲ. ಪ್ರೀತಿ ಮತ್ತು ವಿಶ್ವಾಸವೇ ನಾನು ಮಾಡುತ್ತಿರುವ ಮ್ಯಾಜಿಕ್ ಎಂದು ಅವರು ತಿಳಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ವಿಧಾನ ಸಭಾ ಅಧಿವೇಶನ ಕರೆಯಲಾಗುವುದು ಎಂದರು.

ರಾಜ್ಯದಲ್ಲಿ ಕೋವಿಡ್‌ನಂದ 1ಲಕ್ಷ ಸಾವು ಸಂಭವಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ರಿಯಿಸಿದ ಅವರು, ಎಲ್ಲಾ ಸಾವುಗಳು ಸರಕಾರದ ದಾಖಲೆಯಲ್ಲಿವೆ. ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರದ ದಾಖಲೆಯಲ್ಲಿ ಇದೆ. ನಿಮ್ಮ ಹೇಳಿಕೆಗೆ ಆಧಾರ ಕೊಟ್ಟರೆ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News