ವಾರಾಂತ್ಯ ಲಾಕ್‌ಡೌನಲ್ಲಿ ವ್ಯಾಪಾರಕ್ಕೆ ಅವಕಾಶಕ್ಕೆ: ಪಾದರಕ್ಷೆ, ಜವಳಿ ಮಾರಾಟಗಾರರ ಸಂಘದ ಆಗ್ರಹ

Update: 2021-08-13 08:20 GMT

ಮಂಗಳೂರು, ಆ.12: ವಾರಾಂತ್ಯ ಲಾಕ್‌ಡೌನ್ ಹಿಂಪಡೆಯಬೇಕು. ಇಲ್ಲವೇ ಈಗಾಗಲೇ ಅಗತ್ಯ ವಸ್ತುಗಳಿಗೆ ಈ ಸಂದರ್ಭ ನೀಡಿರುವ ಅವಕಾಶದಂತೆಯೇ ಪರ್ಯಾಯ ದಿನಗಳಲ್ಲಿ ಪಾದರಕ್ಷೆ, ಬಟ್ಟೆ ವ್ಯಾಪಾರಕ್ಕೂ ಅವಕಾಶ ನೀಡಬೇಕು. ಮುಂದಿನ ದಿಗನಳಲ್ಲಿ ಲಾಕ್‌ಡೌನ್ ಮಾಡುವುದಾದರೆ ಅಗತ್ಯ ವಸ್ತುಗಳ ಜತೆಗೆ ಪಾದರಕ್ಷೆ ಮತ್ತು ಜವಳಿ ವ್ಯಾಪಾರಕ್ಕೂ ಅವಕಾಶ ಕಲ್ಪಿಸಬೇಕು ಎಂದು ಕರಾವಳಿ ಟೆಕ್ಸ್‌ಟೈನ್ಸ್ ಮತ್ತು ಫೂಟ್‌ವೇರ್ ಡೀಲರ್ಸ್ ಅಸೋಸಿಯೇಶನ್ ನಿಯೋಗ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅ್ಯಕ್ಷ ಸಂತೋಷ್ ಕಾಮತ್, ಈಗಾಗಲೇ ಈ ಬಗ್ಗೆ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಂಗಳೂರಿನಲ್ಲಿ ಮನವಿ ಸಲ್ಲಿಸಿದೆ. ಅವರು ಪೂರಕವಾಗಿ ಸ್ಪಂದಿಸುವ ಭರವಸೆ ಇದೆ ಎಂದರು.

ವಾರಾಂತ್ಯದ ಲಾಕ್‌ಡೌನ್ ನಿಷ್ಪ್ರಯೋಜಕ. ಅದನ್ನು ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ. ಸೋಂಕು ತಡೆಯಲು ಬಿಗುವಿನ ಕ್ರಮ ಕೈಗೊಳ್ಳುವುದಾದರೆ ಸರಪಳಿ ಕಡಿತಗೊಳಿಸಲು ಆಸ್ಪತ್ರೆ, ಔಷಧಾಲಯ ಹೊರತುಪಡಿಸಿ ಎಲ್ಲಾ ವ್ಯವಹಾರಗಳನ್ನು ಬಂದ್ ಮಾಡಿದರೆ ಮಾತ್ರ ಉದ್ದೇಶ ಫಲಪ್ರದವಾಗಲಿದೆ. ಆ ಕ್ರಮವನ್ನು ನಾವೂ ಸ್ವಾಗತಿಸುತ್ತೇವೆ ಎಂದರು.

ಪ್ರಥಮ ಹಾಗೂ ದ್ವಿತೀಯ ಅಲೆಯ ಸಂದರ್ಭ ಲಾಕ್‌ಡೌನ್‌ನಿಂದ ಜವಳಿ ಹಾಗೂ ಪಾದರಕ್ಷೆ, ಫ್ಯಾನ್ಸಿ ಮೊದಲಾದ ವ್ಯವಹಾರಗಳು ಇಲ್ಲದೆ ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಈ ಮಳಿಗೆಗಳಲ್ಲಿ ದುಡಿಯುವ ಸಾವಿರಾರು ಮಂದಿ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಲಾಕ್‌ಡೌನ್‌ನಲ್ಲಿ ತರಕಾರಿ, ದಿನಸಿ, ಹಾಲು, ಕೃಷಿ ಸಂಬಂಧಿತ ವ್ಯವಹಾರಗಳಿಗೆ ಅವಕಾಶ ನೀಡಲಾಗುತ್ತದೆ. ಮದ್ಯ ವ್ಯಾಪಾರಕ್ಕೂ ಅವಕಾಶವಿದೆ. ಆದರೆ ಟೈಕ್ಸ್‌ಟೈಲ್ಸ್ ಮತ್ತು ಪಾದರಕ್ಷೆ ವ್ಯಾಪಾರಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ನಾವೂ ಸಹನಾಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಉದ್ಯೋಗಿಗಳು, ಕುಟುಂಬದವರು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ ಎಂದು ಸಂತೋಷ್ ಕಾಮತ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಪಿ. ದಿನೇಶ್, ಸುಲೋಚನಾ ಭಟ್, ಸಯೀದ್ ಇಸ್ಮಾಯೀಲ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News