ಮಂಗಳೂರು; ಚೆಕ್ ಅಮಾನ್ಯ ಪ್ರಕರಣ: ಆರೋಪಿ ಅನಿಲ್ ಹೆಗ್ಡೆಗೆ ಆರು ಕೋಟಿ ರೂ. ದಂಡ

Update: 2021-08-13 14:24 GMT
ಅನಿಲ್ ಹೆಗ್ಡೆ

ಮಂಗಳೂರು : ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಆರು ಕೋಟಿ ರೂ. ದಂಡ ವಿಧಿಸಿ ಮಂಗಳೂರಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬಲ್ಲಾಳ್‌ ಬಾಗ್ ನಿವಾಸಿ ಅನಿಲ್ ಹೆಗ್ಡೆ ಆರೋಪಿ.

ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರುದಾರ ಮುಗ್ರೋಡಿಯ ಡ್ಯಾನಿ ಆ್ಯಂಟನಿ ಅವರಿಗೆ ಆರೋಪಿ ಅನಿಲ್ ಹೆಗ್ಡೆ 5,15,73,798 ರೂ. ಪಾವತಿ ಮಾಡಬೇಕಾಗಿತ್ತು. ಈ ಸಂಬಂಧ 3,00,00,000 ರೂ. ಹಾಗೂ 2,15,73,978 ರೂಪಾಯಿ ಮೊತ್ತದ ಎರಡು ಚೆಕ್‌ಗಳನ್ನು ನೀಡಿದ್ದರು. ಈ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದಾಗ ಅನಿಲ್ ಹೆಗ್ಡೆಯ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂದು ಚೆಕ್‌ಗಳು ಅಮಾನ್ಯಗೊಂಡಿದ್ದವು. ಈ ಬಗ್ಗೆ ದೂರುದಾರ ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ಜೆಎಂಎಫ್‌ಸಿ 4ನೇ ನ್ಯಾಯಾಲಯವು ಆರೋಪಿಗೆ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಿದೆ. ಆರೋಪಿಯು ಒಟ್ಟು 6,08,57,000 ರೂ. ದಂಡ ಮೊತ್ತ ಪಾವತಿ ಮಾಡಬೇಕು. ಒಂದೊಮ್ಮೆ ದಂಡದ ಮೊತ್ತ ಪಾವತಿ ಮಾಡಲು ತಪ್ಪಿದರೆ ಆರೋಪಿಯು ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ದಂಡದ ಮೊತ್ತದಲ್ಲಿ 6,08,50,000 ರೂ.ಗಳನ್ನು ದೂರುದಾರರಿಗೆ ಹಾಗೂ 7,000 ರೂ.ನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಎಂ.ಪಿ. ಶೆಣೈ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News