ಮಂಗಳೂರು: ಸ್ಟ್ರೆಚರ್ ನಲ್ಲೇ ಆರೋಪಿ ಕೋರ್ಟ್‌ಗೆ ಹಾಜರು !

Update: 2021-08-14 07:23 GMT

ಮಂಗಳೂರು, ಆ.13: ಕೊಲೆ, ದೊಂಬಿ ಪ್ರಕರಣವೊಂದರ ಆರೋಪಿಯನ್ನು ಸ್ಟ್ರೆಚರ್ ಸಹಾಯದಿಂದ ನಗರದ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾ ಕೋರ್ಟ್‌ನಲ್ಲಿ ಗುರುವಾರ ನಡೆದಿದೆ.

ಅಡ್ಡೂರಿನ ಮುಹಮ್ಮದ್ ಎಂಬಾತನ ವಿರುದ್ಧ ಹಲವು ವರ್ಷಗಳ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತನಿಗೆ ಕೋರ್ಟ್‌ಗೆ ಹಾಜರಾಗುವಂತೆ ವಾರಂಟ್ ಹೊರಡಿಸಲಾಗಿತ್ತು.

ಮುಹಮ್ಮದ್ ಅಸೌಖ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದ. ಕುಟುಂಬ ವರ್ಗ ಆತನಿಂದ ದೂರವಾಗಿ ಅನಾಥವಾಗಿದ್ದ. ಇದು ಆಪದ್ಬಾಂಧವ ಆಸಿಫ್ ಎಂಬವರ ಗಮನಕ್ಕೆ ಬಂದಿದ್ದು, ಕೂಡಲೇ ಅಡ್ಡೂರಿಗೆ ತೆರಳಿ ಮಹಮ್ಮದ್‌ನನ್ನು ಮುಲ್ಕಿ ಕಾರ್ನಾಡುವಿನ ಅನಾಥಾಶ್ರಮಕ್ಕೆ ಕರೆದೊಯ್ದು ಅಲ್ಲಿ ಮೂರು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಹಮ್ಮದ್‌ನನ್ನು ಆ.12ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಆಸಿಫ್ ಪೊಲೀಸರು ಒತ್ತಡ ಹೇರಿದ್ದರು. ಈ ಸಂದರ್ಭ ಆಸಿಫ್ ಅವರು ‘ಮುಹಮ್ಮದ್ ಅಸೌಖ್ಯಕ್ಕೀಡಾಗಿ ಹಾಸಿಗೆ ಹಿಡಿದ ಕಾರಣ ಕೋರ್ಟ್‌ಗೆ ಹಾಜರುಪಡಿಸುವುದು ಕಷ್ಟ’ ಎಂದು ಉತ್ತರಿಸಿದ್ದರು. ಆದರೆ ಪೊಲೀಸರು ಮಾತ್ರ ಹಾಜರುಪಡಿಸಲೇಬೇಕು ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ.

ಆಸಿಫ್ ಅವರು ಗುರುವಾರ ಆ್ಯಂಬುಲೆನ್ಸ್‌ನಲ್ಲೇ ಮುಹಮ್ಮದ್‌ನನ್ನು ದ.ಕ. ಜಿಲ್ಲಾ ಕೋರ್ಟ್‌ಗೆ ಕರೆದುಕೊಂಡು ಬಂದಿದ್ದು, ಸ್ಟ್ರೆಚರ್‌ನಲ್ಲೇ ಮಲಗಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಆರೋಪಿಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ‘ಆರೋಪಿ ಅಸೌಖ್ಯದಿಂದ ಹಾಸಿಗೆ ಹಿಡಿದಿರುವಾಗ ಅವರನ್ನು ಈ ಸ್ಥಿತಿಯಲ್ಲಿ ಕೋರ್ಟ್‌ನ ಮುಂದೆ ಹಾಜರುಪಡಿಸುವ ಅಗತ್ಯವೇನಿತ್ತು? ಯಾಕೆ ಒತ್ತಡ ಹಾಕಿದ್ದೀರಿ? ಆರೋಪಿಯ ವಾಸ್ತವ ಸ್ಥಿತಿಯನ್ನು ವಿವರಿಸಿದರೆ ಸಾಕಿತ್ತಲ್ಲವೇ ? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ಆಸಿಫ್ ಅವರು ಆರೋಪಿಯನ್ನು ಆ್ಯಂಬುಲೆನ್ಸ್‌ನಲ್ಲಿ ಅನಾಥಾಶ್ರಮಕ್ಕೆ ಕರೆದೊಯ್ದರು. ಆರೋಪಿ ಮುಹಮ್ಮದ್ ಸ್ಥಿತಿಯನ್ನು ಕಂಡ ನ್ಯಾಯವಾದಿ ಫಾರೂಕ್ ಅವರು ಇನ್ನು ಮುಂದಿನ ದಿನಗಳಲ್ಲಿ ಆರೋಪಿ ಪರ ಕೋರ್ಟ್‌ನಲ್ಲಿ ಉಚಿತ ವಕಾಲತ್ತು ಮಾಡುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News