ಉಡುಪಿ; ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ ಪ್ರಕಟ

Update: 2021-08-13 17:18 GMT

ಉಡುಪಿ, ಆ.13: ಮೂರು ವರ್ಷಗಳ ಹಿಂದೆ ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಗಳು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದ್ದು, ಆ ವ್ಯಕ್ತಿ ಅಪರಾಧಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ 30 ವರ್ಷ ಪ್ರಾಯದ ಶಂಕರ್ ಎಂಬಾತ ಅಪರಾಧಿಯಾಗಿದ್ದು ಆತ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಲಾಗಿದೆ.

ದಂಡ ಪಾವತಿಸದಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ, ಕೊಲೆ ಬೆದರಿಕೆ ಹಾಕಿದ್ದಕ್ಕೆ 3 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿದ್ದು ದಂಡ ತೆರದಿದ್ದರೆ 6 ತಿಂಗಳು ಸಾದಾ ಸಜೆಗೆ ಆದೇಶಿಸಲಾಗಿದೆ.

ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ಪರಿಹಾರ ನೀಡಲು ಮತ್ತು ದಂಡದ ಹಣದಲ್ಲಿ ಸಂತ್ರಸ್ತೆಗೆ 15 ಸಾವಿರ ಹಾಗೂ 5 ಸಾವಿರ ಸರಕಾರಕ್ಕೆ ನೀಡಲು ಉಡುಪಿ ಫೋಕ್ಸೋ ಕೋರ್ಟ್ ತೀರ್ಪು ನೀಡಿದೆ.

ಘಟನೆ ಹಿನ್ನೆಲೆ: ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಈ ಘಟನೆ 2018ರಲ್ಲಿ ನಡೆದಿತ್ತು. ಸಂತ್ರಸ್ತ ಬಾಲಕಿ ಮನೆಗೆ ಬಂದ ಶಂಕರ್ ಅತ್ಯಾಚಾರವೆಸಗಿದ್ದು ಬಳಿಕ ಆಕೆ ಗರ್ಭವತಿಯಾಗಿದ್ದಳು. ವಿಚಾರ ತಿಳಿದಾಗ ಆಕೆಯ ಪೋಷಕರು ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿ ಯನ್ನು ಬಂಧಿಸಲಾಗಿತ್ತು.

ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 21 ಸಾಕ್ಷಿಗಳ ಪೈಕಿ 11 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು ಡಿಎನ್‌ಎ ವರದಿ ಹಾಗೂ ಸಂತ್ರಸ್ತ ಬಾಲಕಿ ಸಹಿತ ವಿವಿಧ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿದ್ದರಿಂದ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News