ಗಡಿನಾಡ ಸಂಚಾರ ತಡೆದ ಕರ್ನಾಟಕ ಸರಕಾರಕ್ಕೆ ಕೇರಳ ಹೈಕೋರ್ಟ್ ತರಾಟೆ: ಸ್ಪಷ್ಟೀಕರಣಕ್ಕೆ ನೋಟಿಸ್

Update: 2021-08-14 05:01 GMT

ಕಾಸರಗೋಡು, ಆ.14: ಕೇರಳದಿಂದ ಕರ್ನಾಟಕ ತೆರಳುವವರಿಗೆ ರಸ್ತೆ ತಡೆ ಸಹಿತ ನಾಗರಿಕ ಸಂಚಾರನುಮತಿ ನಿಷೇಧಿಸಿದ ಕರ್ನಾಟಕ ಸರಕಾರದ ಕ್ರಮ ಕೇಂದ್ರದ ಕೋವಿಡ್ ನಿಯಮಾವಳಿಯ ಉಲ್ಲಂಘನೆಯಾಗಿದ್ದು, ಈ ಕುರಿತು ಸ್ಪಷ್ಟೀಕರಣ ಕೋರಿ ಕರ್ನಾಟಕಕ್ಕೆ ಕೇರಳ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮಂಜೇಶ್ವರದ ಸಿಪಿಎಂ ಮುಖಂಡ, ಪಕ್ಷದ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ನಾಗರಿಕ ಹಿತಾಸಕ್ತಿಯಿಂದ ಕೇರಳ ಹೈಕೋರ್ಟಿನಲ್ಲಿ ಹೂಡಿದ ದಾವೆ ಪರಿಗಣಿಸಿ ಕೇರಳ ಹೈಕೋರ್ಟ್ ಗಡಿ ಸಂಚಾರ ತಡೆದಿರುವುದನ್ನು ಪ್ರಶ್ನಿಸಿ ಕೇಂದ್ರ ಸಹಿತ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಅದರಂತೆ  ಕರ್ನಾಟಕ ಸರಕಾರ, ದ.ಕ. ಜಿಲ್ಲಾಧಿಕಾರಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಆ.17ರಂದು ಕೋರ್ಟಿಗೆ ಹಾಜರಾಗಿ ಅಧಿಕೃತ ಸಮಜಾಯಿಷಿ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಸದ್ಯ ಕೇರಳದಿಂದ ಯಾರೊಬ್ಬರು ಕರ್ನಾಟಕ ಪ್ರವೇಶಿಸುವುದಿದ್ದರೂ ಅವರು 72 ತಾಸುಗಳ ಒಳಗೆ ಪಡೆದ ಕೋವಿಡ್ ಆರ್ ಟಿಪಿ-ಸಿಆರ್ ಟೆಸ್ಟಿನ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಹೊಂದಿರಬೇಕು ಎಂಬುದು ಕರ್ನಾಟಕದ ಆದೇಶ. ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರ ಸಂಚಾರನುಮತಿ ನಿಷೇಧಿಸಕೂಡದೆಂದು ಕೇಂದ್ರ ಸರಕಾರ ತಿಳಿಸಿದ್ದರೂ ಅದನ್ನು ಕರ್ನಾಟಕ ಸರಕಾರ ಪರಿಗಣಿಸಿಲ್ಲ ಎಂದು ಕೆ.ಆರ್.ಜಯಾನಂದ ಕೋರ್ಟಿನ ಮೊರೆ ಹೋಗಿದ್ದರು.

ಕಾಸರಗೋಡು ಭೂಭಾಗ ಶತಮಾನಗಳ ಹಿಂದೆ ಮದ್ರಾಸು ಪ್ರಾಂತ್ಯ, ಮೈಸೂರು ಪ್ರಾಂತ್ಯದ ಕಾಲದಲ್ಲೇ ದ.ಕ. ಜಿಲ್ಲೆಯ ಭಾಗ. ಶಿಕ್ಷಣ, ಆರೋಗ್ಯ ಚಿಕಿತ್ಸೆ, ಉದ್ಯೋಗ, ಜೀವನ ಸಂಬಂಧ ಇತ್ಯಾದಿಗಳೊಂದಿಗೆ ಕರಾವಳಿಯೊಂದಿಗೆ ಬಾಂಧವ್ಯದ ಬೆಸುಗೆ ಹೊಂದಿದೆ. ಇದು ಸಾಮರಸ್ಯದ ಜೀವನ ಮೌಲ್ಯದ ಸಾಂಸ್ಕೃತಿಕ ಸಂಬಂಧ. ವರ್ತಮಾನದಲ್ಲಿ ಇದಕ್ಕೆಲ್ಲ ತಡೆಯೊಡ್ಡಲಾಗಿದೆ. ಗಡಿನಾಡಿನ ಬಾಂಧವ್ಯ ಕೆಡಿಸುವ ಮಾದರಿಯ ಈ ಧೋರಣೆ ಇದೇ ಮೊದಲು. ಇದರಿಂದಾಗಿ ಗಡಿನಾಡ ಜನತೆಯ ಉದ್ಯೋಗ, ಶಿಕ್ಷಣ, ಚಿಕಿತ್ಸೆ ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗಿದೆ. ಇದು ಸ್ಪಷ್ಟವಾದ ಮಾನವ ಹಕ್ಕು ಉಲ್ಲಂಘನೆ. ಈ ಕುರಿತು ನ್ಯಾಯಾಲಯ ಮುತುವರ್ಜಿಯಿಂದ ಕಾನೂನು ವಿಧೇಯ ಕ್ರಮ ಕೈಗೊಳ್ಳಬೇಕೆಂದು ದೂರುದಾರರ ಪರವಾಗಿ ಹೈಕೋರ್ಟಿನಲ್ಲಿ ನ್ಯಾಯವಾದಿ ಪಿ.ವಿ.ಅನೂಪ್ ಹಾಜರಾಗಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News