ಮಂಗಳೂರು: 1725 ಕೆ.ಜಿ. ಅಪಾಯಕಾರಿ ಸ್ಫೋಟಕ ಪತ್ತೆ; ಆರೋಪಿ ಆನಂದ ಗಟ್ಟಿ ಸೆರೆ

Update: 2021-08-16 15:14 GMT

ಮಂಗಳೂರು, ಆ.16: ನಗರದ ಬಂದರ್‌ನ ಗಾಂಧಿ ಸನ್ಸ್ ಕಟ್ಟಡದ ಕೊಠಡಿಯೊಂದರಲ್ಲಿ ಅಕ್ರಮವಾಗಿ 1725 ಕೆ.ಜಿ.ಗೂ ಅಧಿಕ ಅಪಾಯಕಾರಿ ಸ್ಫೋಟಕ ದಾಸ್ತಾನು ಇರಿಸಿರುವುದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಮುಡಿಪು ಕೈರಂಗಳ ನಿವಾಸಿ ಆನಂದ ಗಟ್ಟಿ (50) ಬಂಧಿತ ಆರೋಪಿ ಎಂದು ಮೂಲಗಳು ತಿಳಿಸಿವೆ.

ಆರೋಪಿಯಿಂದ 400 ಕೆ.ಜಿ. ಸಲ್ಫರ್ ಪೌಡರ್, 350 ಕೆ.ಜಿ. ಪೊಟ್ಯಾಷಿಯಂ ನೈಟ್ರೇಟ್, 50 ಕೆ.ಜಿ. ಬ್ಯಾರಿಯಂ ನೈಟ್ರೇಟ್, 395 ಕೆ.ಜಿ. ಪೊಟ್ಯಾಷಿಯಂ ಕ್ಲೊರೈಟ್, 260 ಕೆ.ಜಿ. ತೂಕದ ವಿವಿಧ ಬಗೆಯ ಅಲ್ಯುಮಿನಿಯಂ ಪೌಡರ್, 30 ಕೆ.ಜಿ. ಸೀಸದ ಗುಂಡುಗಳು,  240 ಕೆ.ಜಿ. ಇದ್ದಿಲು, 100 ಏರ್‌ ರೈಲ್‌ಗಳನ್ನು ಒಳಗೊಂಡ 140 ಕೋವಿ ಗುಂಡಿನ ಚರೆ, 100 ಏರ್ ರೈಲ್‌ಗಳನ್ನು ಒಳಗೊಂಡ 21 ಕೋವಿ ಗುಂಡಿನ ಚರೆಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1500 ಕೆ.ಜಿ. ತೂಕದ ಸ್ಫೋಟಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1.11 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರ ಕೊಠಡಿಯಲ್ಲಿ ಅಕ್ರಮವಾಗಿ ನಿಷೇಧಿತ ಸ್ಫೋಟಕಗಳನ್ನು ದಾಸ್ತಾನು ಇಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳಿರುವ ಕಟ್ಟಡವೊಂದರ ಕೊಠಡಿಯಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ದಾಸ್ತಾನಿಡಲಾಗಿತ್ತು. ಮಕ್ಕಳು, ಪ್ರಾಣಿಗಳು ಓಡಾಡುವ ಪ್ರದೇಶ ಇದಾಗಿತ್ತು. ಈ ಸಂದರ್ಭ ಕೆಲವೊಂದು ವಸ್ತುಗಳು ಸಿಕ್ಕಿದ್ದು, ಅದನ್ನು ಪರಿಶೀಲನೆ ನಡೆಸಿದಾಗ ಅಕ್ರಮ ಸ್ಫೋಟಕ ಎಂಬುವುದು ಸಾಬೀತಾಗಿದೆ.

ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಇದರ ವಾರಸುದಾರರು ನಗರದ ಬಂದರು ಪ್ರದೇಶದಲ್ಲಿ ಗನ್ ಶಾಪ್ ನಡೆಸುತ್ತಿದ್ದ ಆನಂದ್ ಗಟ್ಟಿ ಎಂಬಾತ ಎಂದು ತಿಳಿದುಬಂದಿದೆ. ಆತನ ಗನ್ ಶಾಪ್ ಪರವಾನಿಗೆಗೂ ಪತ್ತೆಯಾದ ಸ್ಫೋಟಕಕ್ಕೂ ಯಾವುದೇ ಸಂಬಂಧವಿಲ್ಲ. ಕೋರೆ, ಪಟಾಕಿ, ಬಾವಿಯ ಕಲ್ಲು ಸ್ಫೋಟಿಸಲು, ಮೀನು ಹಿಡಿಯಲು ಈ ಸ್ಫೋಟಕಗಳನ್ನು ಬಳಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಆನಂದ್ ಗಟ್ಟಿಯನ್ನು ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಆರೋಪಿಗೆ ಸ್ಫೋಟಕಗಳನ್ನು ಪೂರೈಕೆ ಮಾಡುವವರು ಯಾರು ? ಈತನ ಜತೆ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ, ಉಡುಪಿ, ಚಿಕ್ಕಮಗಳೂರು ಸುತ್ತಮುತ್ತಲ ಪ್ರದೇಶ ಸೂಕ್ಷ್ಮ ಹಾಗೂ ನಕ್ಸಲ್ ಪ್ರದೇಶವಾಗಿದೆ. ಇಂತಹ ಪ್ರದೇಶಗಳಲ್ಲಿ ಈ ರೀತಿ ಅಕ್ರಮ ಸ್ಫೋಟಕಗಳನ್ನು ದಾಸ್ತಾನು ಇರಿಸುವುದು ನಿಜಕ್ಕೂ ಆಂತರಿಕ ಭದ್ರತೆಗೆ ಸವಾಲಾಗಿದೆ. ಇಂತಹ ಸ್ಫೋಟಕಗಳು ಅಕ್ರಮವಾಗಿ ಸಿಗುವಾಗ ದುಷ್ಕರ್ಮಿಗಳ ದುರುಪಯೋಪಡಿಸುವ ಸಾಧ್ಯತೆ ಅಧಿಕ.

-ಎನ್. ಶಶಿಕುಮಾರ್, 
ಮಂಗಳೂರು ನಗರ ಪೊಲೀಸ್ ಆಯುಕ್ತ

ನಾಯಿಗೆ ಗುಂಡು ಹೊಡೆದ ಕೇಸು ಬೆನ್ನತ್ತಿದಾಗ ಸ್ಫೋಟಕಗಳ ಪ್ರಕರಣ ಪತ್ತೆ!

ಮಂಗಳೂರಿನ ಶಿವಭಾಗ್ ಸಮೀಪದ ಜುವೆಲ್ಲರಿ ಮಳಿಗೆಯೊಂದರ ಹಿಂಭಾಗದಲ್ಲಿ ಜುಲೈ 2ರಂದು ದುಷ್ಕರ್ಮಿಯೊಬ್ಬ ಬೀದಿನಾಯಿಗೆ ಗುಂಡು ಹೊಡೆದು ಕೊಂದು ಹಾಕಿದ್ದ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸ್ಥಳೀಯ ನಿವಾಸಿ ಅನಿಲ್ ಸೋನ್ಸ್ ಎಂಬಾತನನ್ನು ಬಂಧಿಸಿದ್ದರು.

ಈತನ ವಿಚಾರಣೆ ನಡೆಸಿದಾಗ ಗನ್‌ಗೆ ‘ಪಾಯಿಂಟ್ 22’ ಬುಲೆಟ್ ಬಳಕೆ ಮಾಡಿರುವುದು ಸ್ಪಷ್ಟವಾಗಿದೆ. ಪೊಲೀಸರು ಇದರ ಹಿಂದೆ ಬಿದ್ದು, ಇಂತಹ ಬುಲೆಟ್‌ಗಳು ಎಲ್ಲಿ ಸಿಗುತ್ತವೆ ಎಂದು ವಿವಿಧೆಡೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಬಂದರ್ ಪ್ರದೇಶದಲ್ಲಿ ತಪಾಸಣೆ ನಡೆಸಿದಾಗ ಅಕ್ರಮ ಸ್ಫೋಟಕಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News