ಮಂಗಳೂರು: ಕೋವಿಡ್ ಸೋಂಕು ಭಯದಲ್ಲಿ ದಂಪತಿ ಆತ್ಮಹತ್ಯೆ

Update: 2021-08-17 03:36 GMT

ಮಂಗಳೂರು : ಕೊರೋನ ಸೋಂಕು ತಗುಲಿದೆ ಎಂಬ ಭಯದಲ್ಲಿ ದಂಪತಿ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಕಂಪಾಡಿ ಸಮೀಪ ನಡೆದಿದೆ.

ಆರ್ಯ ಸುವರ್ಣ (45) ಮತ್ತು ಗುಣ ಸುವರ್ಣ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದಂಪತಿ.

 ಗುಣ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದು, ನೋವು ಹೇಳಿಕೊಂಡಿದ್ದಾರೆ. ಸ್ವತಃ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಿನಕ್ಕೆ ಎರಡು ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಂಡರೂ ಸುಗರ್ ಕಂಟ್ರೋಲ್ ಬರ್ತಾ ಇಲ್ಲ.‌ ಜೊತೆಗೆ ಮೆಡಿಸಿನ್ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಮಕ್ಕಳಾಗಿಲ್ಲ. ಎರಡು ಬಾರಿ ಗರ್ಭಿಣಿಯಾಗಿ ತೊದರೆ ಆಗಿತ್ತು. ಒಮ್ಮೆ ಮಗುವಾಗಿ 13 ದಿನದಲ್ಲಿ ತೀರಿಕೊಂಡಿತ್ತು. ನಾವು 2000 ಇಸವಿಯಲ್ಲಿ ಮದುವೆಯಾಗಿದ್ದು ಸುದೀರ್ಘ ಕಾಲದಿಂದ ನೋವು ಕಂಡಿದ್ದೇವೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಉಂಟಾಗಿತ್ತು ಎಂದು ಬರೆದಿದ್ದಾರೆ.

ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದಿದೆ. ‌ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ.‌ ಟಿವಿಯಲ್ಲಿ ಬರುವ ಸುದ್ದಿಗಳನ್ನು ನೋಡಿ ಹೆದರಿದ್ದೇವೆ. ಹಾಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇವೆ. ಮನೆ ಒಳಗಿನ ವಸ್ತುಗಳನ್ನು ಬಡವರಿಗೆ ನೀಡಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಆರ್ಯ ಸುವರ್ಣ ಅವರು ಪೊಲೀಸ್ ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳಿಸಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಹೇಳಿಕೊಂಡಿದ್ದರು. ಕೂಡಲೇ ಪೊಲೀಸ್ ಕಮಿಷನರ್ ಆರ್ಯ ಅವರಿಗೆ ಪ್ರತಿಕ್ರಿಯಿಸಿ, ದುಡುಕಿನ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ. ಮೀಡಿಯಾ ಗ್ರೂಪಿನಲ್ಲಿ ವಾಯ್ಸ್ ಕಳಿಸಿ, ಆತನ ಪತ್ತೆಗೆ ಮತ್ತು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಬೈಕಂಪಾಡಿ ಏರಿಯಾದಲ್ಲಿ ಯಾರಾದ್ರೂ ಇದ್ದರೆ ಈತನ ರಕ್ಷಣೆ ಮಾಡುವಂತೆ ಹೇಳಿದ್ದಾರೆ. 20 ನಿಮಿಷದಲ್ಲಿ ಪೊಲೀಸರ ತಂಡ ಬೈಕಂಪಾಡಿಯ ಅಪಾರ್ಟ್ಮೆಂಟ್ ತಲುಪಿದ್ದು ಅಲ್ಲಿನ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ದಂಪತಿ ಇಬ್ಬರು ಕೂಡ ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಡಿರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News