ಮಂಗಳೂರು: ಕೊರೋನ ಭೀತಿಯಿಂದ ದಂಪತಿ ಆತ್ಮಹತ್ಯೆ ಪ್ರಕರಣ ; ಇಬ್ಬರ ಕೋವಿಡ್ ವರದಿಯೂ ನೆಗೆಟಿವ್ !

Update: 2021-08-17 10:42 GMT

ಮಂಗಳೂರು: ಕೋವಿಡ್ ಸೋಂಕಿನ ಭಯದಿಂದ ಕುಳಾಯಿ ಚಿತ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ -ಗುಣವತಿ ದಂಪತಿಗೆ ಕೊರೋನ ಸೋಂಕು ತಗುಲಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇಬ್ಬರಿಗೂ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಗುಣವತಿ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದು ಕೊರೋನ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಈಗ ನನ್ನ ಪತಿಗೂ ಕೊರೋನ ಗುಣಲಕ್ಷಣ ಕಾಣಿಸಿಕೊಳ್ಳುತ್ತಿದೆ. ನಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನಮಗೂ ಭಯ ಕಾಡುತ್ತಿದೆ. ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಗುಣವತಿ ಅವರಿಗೆ ಇತರ ಆರೋಗ್ಯ ಸಮಸ್ಯೆಯೂ ಇರುವುದನ್ನು ಬರೆದುಕೊಂಡಿದ್ದರು. ಮಕ್ಕಳಿಲ್ಲದ ಕೊರಗು ಕೂಡ ದಂಪತಿಯನ್ನು ಕಾಡಿತ್ತು.
ಕೊರೋನ ಇದೇ ಎಂದು ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಇದಕ್ಕೂ ಮೊದಲು, "ಕೊರೋನ ಭಯದಿಂದ ನಾನು ಮತ್ತು ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಬೆಳಗ್ಗೆ 6:40ರ ಸಮಯಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಈ ವೇಳೆ ತಕ್ಷಣ ಕಮಿಷನರ್ ಕಾಲ್ ಮಾಡಿ ಧೈರ್ಯ ತುಂಬಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಿರಲಿಲ್ಲ.

ದಂಪತಿ ವಾಸವಾಗಿದ್ದ ಫ್ಲ್ಯಾಟ್ ನ ಲೊಕೇಶನ್ ಟ್ರೇಸ್ ಮಾಡಿ, ಪೊಲೀಸ್ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಅಷ್ಟರಲ್ಲೇ ದಂಪತಿ ದುಡುಕಿನ ನಿರ್ಧಾರ ಕೈಗೊಂಡಿದ್ದರು. ಮೃತರಿಗೆ ಕೊರೋನ ಸೋಂಕಿನ ಮೂಲ ಜಾಗೃತಿಯ ಕೊರತೆಯೇ ದುರ್ಘಟನೆ ಸಂಭವಿಸಲು ಕಾರಣ ಎಂಬಂತಹ ಅಭಿಪ್ರಾಯಗಳು ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News