ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೆಸರು ಬಳಸಿ ನಕಲಿ ಹೇಳಿಕೆ ಸೃಷ್ಟಿ ಆರೋಪ: ದೂರು ದಾಖಲು

Update: 2021-08-17 17:32 GMT
ಮುನೀರ್ ಕಾಟಿಪಳ್ಳ

ಮಂಗಳೂರು, ಆ.17: ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೆಸರನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಹೇಳಿಕೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

"ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯೋತ್ಸವ ದಿನದ ಸಾವರ್ಕರ್ ವಿಚಾರ, ಬಂದರ್‌ನಲ್ಲಿ ಸ್ಫೋಟಕ ದಾಸ್ತಾನು ಪತ್ತೆ ಪ್ರಕರಣ, ಮೂಡುಬಿದಿರೆಯ ಕಾಡುಪ್ರಾಣಿ ಬೇಟೆಗಾರರ ಬಂಧನ ಪ್ರಕರಣಗಳನ್ನು ಸೇರಿಸಿ ಕಿಡಿಗೇಡಿಗಳು ಹೇಳಿಕೆಯೊಂದನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ" ಎಂದು ಮುನೀರ್ ಕಾಟಿಪಳ್ಳ  ದೂರಿನಲ್ಲಿ ತಿಳಿಸಿದ್ದಾರೆ.

"ಸಾಮಾನ್ಯವಾಗಿ ನಾನು ಸಾಮಾಜಿಕ, ರಾಜಕೀಯ ಆಗು-ಹೋಗುಗಳಿಗೆ ಸಂಬಂಧಿಸಿ ಯಾವುದೇ ಬರಹವನ್ನು ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ, ನಂತರ ಬೇರೆ ಕಡೆ ಹಂಚುತ್ತೇನೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡದೇ ಇರುವ ಬರಹಗಳು ನನ್ನದಲ್ಲ" ಎಂದು ಅವರು ತಿಳಿಸಿದ್ದಾರೆ.

"ದುರುದ್ದೇಶದಿಂದ, ಒಂದಕ್ಕೊಂದು ಸಂಬಂಧಪಡದ ವಿಚಾರಗಳನ್ನು ಜೋಡಿಸಿ, ಸಾರ್ವಜನಿಕ ಘನತೆಗೆ ತಕ್ಕುದಲ್ಲದ ಪದಗಳನ್ನು ಬಳಸಿ, ನನ್ನ ಹೆಸರಿನಲ್ಲಿ ನಕಲಿ ಹೇಳಿಕೆ ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

"ಸಮಾಜದಲ್ಲಿನ ಗೌರವ, ರಾಜಕಾರಣ, ಸಂಘಟನೆಯಲ್ಲಿ ನನ್ನ ಸ್ಥಾನಮಾನಕ್ಕೆ ಕುಂದುಂಟು ಮಾಡುವಂತಿದೆ. ನನ್ನ ಕುರಿತು ತಪ್ಪು ಅಭಿಪ್ರಾಯ, ಅಸಹನೆ ಮೂಡಿಸುವುದು ಈ ಹೇಳಿಕೆ ಸೃಷ್ಟಿಸಿರುವವರ ಉದ್ದೇಶ ಇರುವಂತಿದೆ. ನಕಲಿ ಹೇಳಿಕೆ ಸೃಷ್ಟಿಸಿರುವವರನ್ನು ಪತ್ತೆ ಹಚ್ಚಿ, ಇಂತಹ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News