ಉಡುಪಿ: ಕೋವಿಡ್‌ಗೆ ಯುವಕ ಸೇರಿ ಇಬ್ಬರು ಬಲಿ, 97 ಮಂದಿಗೆ ಕೊರೋನ ಪಾಸಿಟಿವ್

Update: 2021-08-18 15:11 GMT

ಉಡುಪಿ, ಆ.18: ಜಿಲ್ಲೆಯಲ್ಲಿ 30ರ ಹರೆಯದ ಯುವಕ ಸೇರಿ ಇಬ್ಬರು ಕೋವಿಡ್‌ಗೆ ಬಲಿಯಾಗಿದ್ದರೆ, ಬುಧವಾರ 97 ಮಂದಿಯಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಂಡುಬಂದಿದೆ. ದಿನದಲ್ಲಿ 131 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1293ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ಉಡುಪಿಯ 30ರ ಹರೆಯದ ಯುವಕ ಹಾಗೂ 57ರ ಹರೆಯದ ಪುರುಷರು ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾಕ್ಕಾಗಿ ಆ.9ರಂದು ಆಸ್ಪತ್ರೆಗೆ ದಾಖಲಾಗಿದ್ದರು. 57ರ ಹರೆಯದ ಪುರುಷರು ಕೋವಿಡ್‌ನೊಂದಿಗೆ ಇತರ ದೈಹಿಕ ಸಮಸ್ಯೆಯಿಂದ ಬಳಲುತಿದ್ದರು. ಇವರಿಬ್ಬರ ನಿಧನದಿಂದ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 436ಕ್ಕೇರಿದೆ.

ಬುಧವಾರ ಕೊರೋನ ಸೋಂಕು ದೃಢಪಟ್ಟ 97 ಮಂದಿಯಲ್ಲಿ 44 ಮಂದಿ ಪುರುಷರು ಹಾಗೂ 53 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 53 ಮಂದಿ ಉಡುಪಿ ತಾಲೂಕು, 18 ಮಂದಿ ಕುಂದಾಪುರ, 26 ಮಂದಿ ಕಾರ್ಕಳ ತಾಲೂಕಿನವರಾದರೆ ಹಾಗೂ ಒಬ್ಬರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 15 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 82 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಮಂಗಳವಾರ 131 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 70,415ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 5866 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 72,144ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,64,644 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ ಯಾರಲ್ಲೂ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿಲ್ಲ. ಸದ್ಯ ಹೊರಜಿಲ್ಲೆಗಳ ನಾಲ್ವರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

9502 ಮಂದಿಗೆ ಲಸಿಕೆ:  ಉಡುಪಿ ಜಿಲ್ಲೆಯಲ್ಲಿ ಬುಧವಾರ 9502 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 7,216 ಮಂದಿಗೆ ಮೊದಲ ಡೋಸ್ ಹಾಗೂ 2286 ಮಂದಿಗೆ ಎರಡನೇ ಡೋಸ್‌ನ್ನು ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 5,599 ಮಂದಿ ಮೊದಲ ಹಾಗೂ 1498 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 1617 ಮಂದಿಗೆ ಮೊದಲ ಹಾಗೂ 788 ಮಂದಿಗೆ ಎರಡೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News