50 ಲಕ್ಷ ರೂ. ಆಸ್ಪತ್ರೆ ನೌಕರರ ವೇತನ, ಸೌಲಭ್ಯಗಳಿಗೆ ವಿನಿಯೋಗ: ಬಿಆರ್‌ಎಸ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ

Update: 2021-08-20 15:03 GMT

ಉಡುಪಿ, ಆ.20: ಸರಕಾರ ಬಿಡುಗಡೆಗೊಳಿಸಿದ 50 ಲಕ್ಷರೂ.ಗಳನ್ನು ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಇತರ ಸಿಬ್ಬಂದಿಗಳ ಸಂಬಳ ಹಾಗೂ ಪಿಎಫ್, ಇಎಸ್‌ಐ ಹಾಗೂ ಇತರ ಸೌಲಭ್ಯಗಳಿಗೆ ವಿನಿಯೋಗಿಸಲಾಗಿದೆ ಎಂದು ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿ. ಸ್ಪಷ್ಟೀಕರಣ ನೀಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆಗೊಳಿಸಿರುವ ಬಿಆರ್‌ಎಸ್ ಗ್ರೂಫ್, ಸರಕಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್)ಗೆ ಬಿಡುಗಡೆ ಗೊಳಿಸಿರುವ 50 ಲಕ್ಷ ರೂ. ಬೆಂಬಲ ನಿಧಿಯಲ್ಲ. ಬದಲು ಇದು ಸರಕಾರ ಆಯುಷ್ಮಾನ್ ಭಾರತ್ ಸುವರ್ಣ ಕರ್ನಾಟಕ (ಎಬಿಆರ್‌ಕೆ) ಯೋಜನೆಯಡಿ ಎಂಸಿಎಚ್‌ಗೆ ನೀಡಲು ಬಾಕಿ ಇರುವ ಒಪ್ಪಿಕೊಂಡ ಮೊತ್ತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2018ರ ಜ.19ರಿಂದ ಇಂದಿನವರೆಗೆ ಈ ಆಸ್ಪತ್ರೆಯಲ್ಲಿ 2,02ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಹಾಗೂ 11,496 ಹೆರಿಗೆಗಳನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗಿದೆ. ಎಲ್ಲರಿಗೂ ನಾವು ಶ್ರೇಷ್ಠ ಗುಣಮಟ್ಟ ಚಿಕಿತ್ಸೆಯನ್ನು ನೀಡಿದ್ದೇವೆ. ರಾಜ್ಯ ಸರಕಾರ ಕನಿಷ್ಠ 30 ವರ್ಷಗಳ ಲೀಸ್‌ನೊಂದಿಗೆ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆಯನ್ನು ನಡೆಸಲು ಬಿಆರ್‌ಎಸ್ ಗ್ರೂಪ್‌ನೊಂದಿಗೆ 2016ರ ಅ.29ರಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಅ.30ರಂದು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಗಿತ್ತು. 2017ರ ನ.19ರಂದು ಅಂದಿನ ಮುಖ್ಯಮಂತ್ರಿಗಳು ಆಸ್ಪತ್ರೆಯನ್ನು ಉದ್ಘಾಟಿಸಿದ್ದರೆ, 2018ರ ಜ.18ರಿಂದ ಇದನ್ನು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಲಾಗಿತ್ತು.

ಒಪ್ಪಂದದಂತೆ ಬಿಆರ್‌ಎಸ್ ಗ್ರೂಪ್ 200 ಹಾಸಿಗೆಗಳ ಅತ್ಯಾಧುನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿ ಅಲ್ಲಿನ ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದು. ಇದಕ್ಕೆ ಪ್ರತಿಯಾಗಿ ಪಕ್ಕದ ಜಾಗದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿ ನಡೆಸುವುದಕ್ಕೆ ಒಪ್ಪಿಕೊಳ್ಳಲಾಗಿತ್ತು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಸರಕಾರ ಮತ್ತು ಬಿಆರ್‌ಎಸ್ ಗ್ರೂಪ್‌ಗಳ ನಡುವೆ ಪ್ರಾರಂಭಿಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತಾದರೂ, ಅಂತಿಮ ಒಪ್ಪಂದದ ಕರಡು ಪ್ರತಿ 2018 ಅಕ್ಟೋಬರ್‌ನಲ್ಲೇ ಸಿದ್ಧಪಡಿಸಿದ್ದರೂ, ಅಂತಿಮ ಒಪ್ಪಂದಕ್ಕೆ ಇದುವರೆಗೆ ಸರಕಾರ ಸಹಿ ಹಾಕಿಲ್ಲ ಎಂದು ಹೇಳಿಕೆಯಲ್ಲಿ ದೂರಲಾಗಿದೆ. ಇದರೊಂದಿಗೆ ಬಿಆರ್‌ಎಸ್ ಗ್ರೂಪ್ ನಿರ್ಮಿಸಬೇಕಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೂ ಸ್ಥಳೀಯ ಆಡಳಿತ ಇದುವರೆಗೆ ಅನುಮತಿ ನೀಡಿಲ್ಲ ಎಂದು ಹೇಳಲಾಗಿದೆ.

ಆದರೂ ಬಿಆರ್‌ಎಸ್ ಆಸ್ಪತ್ರೆಯ ಇಡೀ ತಂಡ ಸ್ವಾರ್ಥ ರಹಿತವಾಗಿ, ಸಂಪೂರ್ಣ ಸಮರ್ಪಣಾಭಾವ ಹಾಗೂ ನಿಷ್ಠೆಯಿಂದ ಜನರ ಸೇವೆಯನ್ನು ಮಾಡಿ, ಯಾವುದೇ ಬೇಧಭಾವವನ್ನು ಭಾವಿಸದೇ ಎಲ್ಲರಿಗೂ ಶ್ರೇಷ್ಠ ಸೇವೆಯನ್ನು ನೀಡಿ ಆಸ್ಪತ್ರೆಯ ಗೌರವವನ್ನು ಮೇಲ್ಮಟ್ಟಕ್ಕೆ ಒಯ್ದಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಭಾವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆದರೆ ಇತ್ತೀಚೆಗೆ ಕೆಲವು ವ್ಯಕ್ತಿಗಳು ಪೂರ್ವಾಗ್ರಹ ಪೀಡಿತರಾಗಿ, ವ್ಯಕ್ತಿಗತ ಏಜೆಂಡಾಗಳೊಂದಿಗೆ ಆಸ್ಪತ್ರೆಯ ಕಾರ್ಯದಲ್ಲಿ ಮಧ್ಯ ಪ್ರವೇಶಿಸುತಿದ್ದು, ನಮ್ಮ ಆಸ್ಪತ್ರೆಯ ಸಿಬ್ಬಂದಿಗಳನ್ನು ಎತ್ತಿಕಟ್ಟಿ ಆಸ್ಪತ್ರೆಯ ದೈನಂದಿನ ಚಟುವಟಿಕೆಗೆ ಅಡ್ಡಿಪಡಿಸಲು ಪ್ರಯತ್ನಿಸುತಿದ್ದಾರೆ. ಕೆಲವು ವ್ಯಕ್ತಿಗಳ ವೈಯಕ್ತಿಕ ಸ್ವಾರ್ಥಕ್ಕೆ ತಾಯಿ-ಮಕ್ಕಳ ಆಸ್ಪತ್ರೆಯ ಸಾರ್ವಜನಿಕರು, ಬಡ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಸರಕಾರಕ್ಕೆ ಹೊಸ ಪ್ರಸ್ತಾಪ?

ಸರಕಾರ, ಅಂತಿಮ ಒಪ್ಪಂದಕ್ಕೆ ಸಹಿಹಾಕಲು ವಿಳಂಬ ಮಾಡುತ್ತಿರುವು ದರಿಂದ, ನಾವು ನೀಡುವ ಸೇವೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿ ಹೊಸ ಪ್ರಸ್ತಾಪವನ್ನು ಸರಕಾರಕ್ಕೆ ನೀಡಿದ್ದು, ಅದು ಕಳೆದೆರಡು ತಿಂಳಿನಿಂದ ಸರಕಾರದ ಬಳಿ ಬಾಕಿ ಉಳಿದಿದೆ.

ರಾಜ್ಯ ಸರಕಾರದ ಸಂಪೂರ್ಣ ಬೆಂಬಲದೊಂದಿಗೆ, ಎಂಸಿಎಚ್ ಆಸ್ಪತ್ರೆಯನ್ನು ಸಂಪೂರ್ಣ ಬದ್ಧತೆಯ ಸಹಿತ ಉಚಿತ ಸೇವೆಯನ್ನು ಜನರಿಗೆ ನೀಡುವ ಭರವಸೆಯನ್ನು ನಾವು ನೀಡುತ್ತೇವೆ. ಎಂಸಿಎಚ್‌ನ ಎಲ್ಲಾ ಸೇವೆಗಳು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಹಾಗೂ ತಡೆ ಇಲ್ಲದೆ ದೊರೆಯಲಿದೆ ಎಂದು ನಾವು ಆಶ್ವಾಸನೆ ನೀಡುತ್ತೇವೆ ಎಂದು ಬಿಆರ್‌ಎಸ್ ಗ್ರೂಪ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News