ಸಮುದಾಯಗಳ ಮಧ್ಯೆ ಸೌಹಾರ್ದತೆ ಕಾಯ್ದುಕೊಂಡು ಬರಬೇಕು: ಮಮತಾ ದೇವಿ

Update: 2021-08-20 17:09 GMT

ಭಟ್ಕಳ: ವಿವಿಧ ಸಮುದಾಯಗಳ ಮಧ್ಯೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವುದೇ ಸದ್ಭಾವನ ದಿವಸ ಇದರ ಉದ್ದೇಶವಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ ಹೇಳಿದರು.

ಅವರು ಶುಕ್ರವಾರ ಸಂಜೆ ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಸದ್ಭಾವನಾ ದಿವಸ್ ಅಂಗವಾಗಿ ಭಟ್ಕಳದ ಸದ್ಭಾವನ ಮಂಚ್ ಆಯೋಜಿಸಿದ್ದ ‘ಸಾರ್ವಾಜನಿಕ ಸದ್ಭಾವನಾ ಪ್ರತಿಜ್ಞಾವಿಧಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದರು.

ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಭಟ್ಕಳ ತಾಲೂಕು ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ ಕುಮಾರ್, ಸ್ದಭಾವನಾ ಕಾರ್ಯಕ್ರಮಗಳು ಸರ್ಕಾರಿ ಕಚೇರಿಗಳಿಗೆ ಸೀಮಿತವಾಗದೆ ಸಾರ್ವಜನಿಕ ಮಟ್ಟದಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಭಟ್ಕಳದ ಸದ್ಭಾವನಾ ಮಂಚ್ ಸಂಘಟನೆ ಇಂದು ಸಾರ್ವಾಜನಿಕರೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸುವುದರ ಮೂಲಕ ಒಂದು ಹೊಸ ಕಲ್ಪನೆ ಹುಟ್ಟುಹಾಕಿದೆ. ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿದ ನಮ್ಮ ರಾಷ್ಟ್ರದಲ್ಲಿ ಎಲ್ಲರೂ ಪ್ರೀತಿ ಪ್ರೇಮದ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು. 

ಚಿಂತಕ ಪ್ರೊ.ಎಸ್.ಆರ್.ನಾಯಕ ಮಾತನಾಡಿ, ಜಗತ್ತಿನಲ್ಲಿ ಜಾತಿ, ಕೋಮು, ಲಿಂಗ ತಾರತಮ್ಯಗಳಿಂದ ಪರಸ್ಪರರ ವಿಚಾರ ಮತ್ತು ಭಾವನೆ ಗಳಲ್ಲಿ ಕಲಬೆರಕೆ ಉಂಟಾಗುತ್ತಿದೆ. ನಮ್ಮಲ್ಲಿನ ವೈರುದ್ಯತೆಗಳನ್ನು ಬದಿಗಿಟ್ಟು ಮನುಷ್ಯರೆಲ್ಲರು ಒಂದು ಎಂಬ ಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಸದ್ಭಾವನೆ ಎಂದರೆ ದ್ವೇಷಗಳನ್ನು ದೂರ ಮಾಡಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ನಮ್ಮಲ್ಲಿನ ವ್ಯತ್ಯಾಸಗಳು ದೊಡ್ಡದಾಗಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ನಮ್ಮಲ್ಲಿ ಐಕ್ಯತೆಯನ್ನು ಮುರಿಯುವ ಕೆಲಸ ಮಾಡುತ್ತಿರುವವರಿಗೆ ಸದ್ಭಾವನೆಯ ಮೂಲಕ ಉತ್ತರ ನೀಡಬೇಕಾಗಿದೆ ಎಂದರು.

ಸದ್ಭಾವನ ಮಂಚ್ ಹಿರಿಯ ಸದಸ್ಯ ಎಂ.ಆರ್.ನಾಯ್ಕ ಮಾತನಾಡಿ, ಮನುಷ್ಯ ಶ್ರೇಷ್ಠ ವರ್ಗದವನಾಗಿದ್ದು ಎಲ್ಲರನ್ನು ಪ್ರೀತಿಯಿಂದ ಕಾಣಬೇಕು, ಜಾತಿಮತ, ಪಂಥವನ್ನು ಲೆಕ್ಕಿಸದೆ ಮಾನವೀಯತೆಯೇ ಶ್ರೇಷ್ಟ ಎಂದು ತಿಳಿಯಬೇಕು ಎಂದ ಅವರು ಎಲ್ಲರನ್ನು ಬದುಕಲು ಬಿಡಬೇಕು, ನಾನು ಬದುಕಬೇಕು ಇನ್ನೊಬ್ಬರನ್ನು ಬದುಕಲು ಬಿಡಬೇಕು ಎಂದರು. ಭಾರತವನ್ನು ಯಾರ್ಯಾರೋ ಆಳಿದರು. ಆದರೂ ಭಾರತ ಇಂದು ತನ್ನಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು.

ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್. ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. 
ಕಾರ್ಯಕ್ರಮದಲ್ಲಿ ಆರ್.ಎನ್.ಎಸ್. ಪೊಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಮರಿಸ್ವಾಮಿ, ಕರ್ನಾಟಕ ಜರ್ನಲಿಷ್ಟ್ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಖಾದಿರ್ ಮೀರಾ ಪಟೇಲ್, ಮೌಲಾನ ಸೈಯ್ಯದ್ ಝುಬೇರ್, ಸೈಯ್ಯದ್ ಶಕೀಲ್ ಎಸ್.ಎಂ, ಯೂನೂಸ್ ರುಕ್ನುದ್ದೀನ್, ಭಾರತ್ ಸ್ಕೌಟ್ಸ್ ಕಾರ್ಯಾದರ್ಶಿ ವೆಂಕಟೇಶ್ ಗುಬ್ಬಿ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News