ಮಂಗಳೂರಿನ ಅಫ್ಘಾನ್ ವಿದ್ಯಾರ್ಥಿಗಳ ಆತಂಕ ಆಲಿಸಿದ ಕಮಿಷನರ್!

Update: 2021-08-21 08:59 GMT

ಮಂಗಳೂರು, ಆ.21: ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಆತಂಕವನ್ನು ಆಲಿಸಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಅವರಿಗೆ ಸುರಕ್ಷತೆಯ ಭರವಸೆಯನ್ನು ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ, ನಿಟ್ಟೆ ವಿದ್ಯಾ ಸಂಸ್ಥೆ ಹಾಗೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಫ್ಘಾನಿಸ್ತಾನದ ಒಟ್ಟು 58 ವಿದ್ಯಾರ್ಥಿಗಳು (ಪದವಿ, ಸ್ನಾತಕೋತ್ತರ, ಪಿಎಚ್‌ಡಿ) ಅಧ್ಯಯನ ಮಾಡುತ್ತಿದ್ದಾರೆ. ಅವರ ಜತೆಗೆ ಕೆಲವರ ಕುಟುಂಬ ಸದಸ್ಯರು ಕೂಡಾ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲಿನ ತಮ್ಮ ಕುಟುಂಬದವರ ಬಗ್ಗೆ ಆತಂಕಕ್ಕೀಡಾಗಿರುವ ವಿದ್ಯಾರ್ಥಿಗಳು ಹಾಗೂ ಅವರ ಮನೆಯವರು ಇಂದು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ತಮ್ಮ ಆತಂಕ, ಬೇಡಿಕೆಗಳನ್ನು ಮುಂದಿಟ್ಟರು. ಮಾತ್ರವಲ್ಲದೆ ಅಧ್ಯಯನ ನಡೆಸುತ್ತಿರುವ ಕೆಲವು ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟಂಬರ್‌ನಲ್ಲಿ ಕೊನೆಗೊಳ್ಳುತ್ತಿದ್ದು, ಅದನ್ನು ವಿಸ್ತರಣೆ ಮಾಡುವ ಕುರಿತಂತೆಯೂ ಈ ಸಂದರ್ಭ ಮನವಿ ಸಲ್ಲಿಸಿದರು.

ಅಫ್ಘಾನ್ ವಿದ್ಯಾರ್ಥಿಗಳ ಒಕ್ಕೂಟದ ಪ್ರಮುಖರಾದ ನಾಸಿರ್ ಅಹ್ಮದ್ ಎಂಬವರು ಮಾತನಾಡಿ, ಮಂಗಳೂರಿನಲ್ಲಿರುವ ಅಫ್ಘಾನ್ ವಿದ್ಯಾರ್ಥಿಗಳ ಬಗ್ಗೆ ಪೊಲೀಸ್ ಆಯುಕ್ತರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಸುಮಾರು 15 ವರ್ಷಗಳಿಂದೀಚೆಗೆ ಅಫ್ಘಾನ್‌ನ ಹಲವಾರು ವಿದ್ಯಾರ್ಥಿಗಳು ಮಂಗಳೂರು ನಗರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಆಗಮಿಸುತ್ತಿದ್ದಾರೆ. ಭಾರತದ ಬಗ್ಗೆ ಅಫ್ಘಾನ್ ವಿದ್ಯಾರ್ಥಿಗಳು ಹಾಗೂ ಕುಟುಂಬದವರಿಗೆ ಅಪಾರವಾದ ಗೌರವವಿದ್ದು, ಕೇಂದ್ರ ಸರಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಅಲ್ಲಿರುವ ತಮ್ಮ ಕುಟುಂಬಗಳ ಬಗ್ಗೆ ಆತಂಕಿತರಾಗಿದ್ದೇವೆ. ಪೊಲೀಸ್ ಇಲಾಖೆಯಿಂದ ನಮಗೆ ಸುರಕ್ಷತೆಯ ಭರವಸೆ ದೊರಕಿದೆ’’ ಎಂದರು.

ನಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ಕಾಡುತ್ತಿದೆ
‘‘ನಾನು ಅಫ್ಘಾನಿಸ್ತಾನದ ಕಾಬೂಲ್‌ನ ವಿವಿಯೊಂದರಲ್ಲಿ ಕಂಪ್ಯೂಟರ್ ಸಾಯನ್ಸ್ ಉಪನ್ಯಾಸಕನಾಗಿದ್ದೇನೆ. ನಾನಿಲ್ಲಿ ಮಂಗಳೂರು ವಿವಿಯಲ್ಲಿ ಪಿಎಚ್‌ಡಿ ಅಧ್ಯಯನಕ್ಕಾಗಿ ಪತ್ನಿ ಹಾಗೂ ಮಕ್ಕಳ ಜತೆ ಆಗಮಿಸಿದ್ದು, ನನ್ನ ಕುಟುಂಬದ ಸದಸ್ಯರು ಅಫ್ಘಾನಿಸ್ತಾನದಲ್ಲಿದ್ದಾರೆ. ಅವರ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರೆಲ್ಲಾ ಸುರಕ್ಷಿತವಾಗಿದ್ದಾರೆ. ಆದರೆ ಅಲ್ಲಿನ ಬೆಳವಣಿಗೆಗಳು ಮಾತ್ರ ಆತಂಕಕ್ಕೆ ಕಾರಣವಾಗಿದೆ’’ ಎಂದು ಮಂಗಳೂರು ವಿವಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಅಫ್ಘಾನ್ ಪ್ರಜೆಯೊಬ್ಬರು ತಿಳಿಸಿದ್ದಾರೆ.

‘‘20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನಡೆಸಿದ ಕ್ರೂರತೆಯ ಬಗ್ಗೆ ನಮಗೆ ಅರಿವಿದೆ. ಹಾಗಾಗಿಯೇ ನಮಗೆ ಅಲ್ಲಿರುವ ನಮ್ಮ ಕುಟುಂಬಗಳ ಬಗ್ಗೆ ಆತಂಕವಿದೆ. ನಾವು ಮಹಿಳೆಯ ಸ್ವಾತಂತ್ರ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತೇವೆ. ಆದರೆ ಅವರ ಸಿದ್ಧಾಂತದ ಪ್ರಕಾರ ಮಹಿಳೆಯರು ಮನೆಯಿಂದಲೂ ಹೊರ ಬರುವುದಕ್ಕೆ ವಿರೋಧವಿದೆ. ಅಂತಹ ಯಾವುದೇ ಪ್ರಕ್ರಿಯೆಗಳು ನಡೆಯದಿರಲಿ ಎಂಬುದು ನಮ್ಮ ಆಶಯ’’ ಎಂದು ಅಫ್ಘಾನ್ ಮೂಲದ ಇನ್ನೋರ್ವ ಪಿಎಚ್‌ಡಿ ವಿದ್ಯಾರ್ಥಿ ಪ್ರತಿಕ್ರಿಯಿಸಿದರು.

‘‘ನಾವು ಇಲ್ಲಿ ನಮ್ಮ ಕುಟುಂಬದವರಿಂದ ದೂರವಾಗಿ ಶಿಕ್ಷಣಕ್ಕಾಗಿ ಬಂದಿದ್ದೇವೆ. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಾವು ಆತಂಕದಿಂದಲೇ ದಿನ ದೂಡುವಂತಾಗಿದೆ’’ ಎಂದು ಬಿಎ(ಎಕನಾಮಿಕ್ಸ್) ಅಧ್ಯಯನ ಮಾಡುತ್ತಿರುವ ಅಫ್ಘಾನ್ ಮೂಲದ ಯುವತಿ ಪ್ರತಿಕ್ರಿಯಿಸಿದರು.


‘ಮಂಗಳೂರಿನಲ್ಲಿ ಅಫ್ಘಾನ್‌ನ ಕಾಬೂಲ್ ಹಾಗೂ ಸುತ್ತಮುತ್ತಲ ಪ್ರದೇಶದ 58 ವಿದ್ಯಾರ್ಥಿಗಳು (55 ಮಂದಿ ಮಂಗಳೂರು ವಿವಿ, ಒಬ್ಬರು ನಿಟ್ಟೆ, ಎರಡು ಮಂದಿ ಸಂತ ಅಲೋಶಿಯಸ್ ಕಾಲೇಜು) ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ 11 ಮಂದಿ ಅಫ್ಘಾನ್‌ಗೆ ತೆರಳಿದ್ದು, ಅವರೀಗ ಪರೀಕ್ಷೆಗಾಗಿ ಆಗಮಿಸಲು ಮನವಿ ಮಾಡಿಕೊಂಡಿದ್ದಾರೆ. ಇದೇವೇಳೆ ಇಲ್ಲಿ ಅಧ್ಯಯನ ಪೂರ್ಣಗೊಂಡಿರುವ ಕೆಲವು ವಿದ್ಯಾರ್ಥಿಗಳ ವೀಸಾ ಸೆಪ್ಟಂಬರ್‌ಗೆ ಕೊನೆಗೊಳ್ಳಲಿದೆ. ಮತ್ತೆ ಹಿಂದಿರುಗುವುದಾದರೆ ಹೇಗೆ ಹಾಗೂ ಈಗಾಗಲೇ ಕೆಲವರು ಹೋದವರು ಮತ್ತೆ ಬಂದು ಪರೀಕ್ಷೆಗೆ ಹಾಜರಾಗಲು ಅವಕಾಶದ ಬಗ್ಗೆಯೂ ಕೋರಿಕೆ ಸಲ್ಲಿಸಲಾಗಿದೆ. ಅಫ್ಘಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಕೆಲವೊಂದು ಬೇಡಿಕೆಗಳನ್ನು ವಿದ್ಯಾರ್ಥಿಗಳು ನೀಡಿದ್ದಾರೆ. ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗುವುದು. ಇಲ್ಲಿರುವ ಎಲ್ಲರೂ ಅಫ್ಘಾನಿಸ್ತಾದ ತಮ್ಮ ಕುಟುಂಬದ ಜತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಅಲ್ಲಿನ ಸೇನೆ, ಪೊಲೀಸ್, ಕಾಲೇಜು, ಮಾಧ್ಯಮ, ಮಾನವ ಹಕ್ಕು ಸೇರಿದಂತೆ ವಿವಿಧ ಹುದ್ದೆಗಳಲಿದ್ದು, ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂದವರೂ ಇದ್ದಾರೆ.’’

-ಎನ್. ಶಶಿಕುಮಾರ್, ಆಯುಕ್ತರು, ಮಂಗಳೂರು ಪೊಲೀಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News