ಉಡುಪಿ ಸೀರೆ ಪುನಶ್ಚೇತನ: ಕಾರ್ಕಳ ಕದಿಕೆ ಟ್ರಸ್ಟ್‌ಗೆ ನಬಾರ್ಡ್ ಪ್ರಶಸ್ತಿ

Update: 2021-08-21 13:01 GMT

ಉಡುಪಿ, ಆ.21: ಕಳೆದ ಸುಮಾರು ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್‌ಗೆ ಈ ಸಲದ ನಬಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮುಂಬೈಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ನಬಾರ್ಡ್ ಈ ಬಾರಿ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿರುವುದಕ್ಕೆ ಆಯ್ಕೆ ಮಾಡಿರುವ ಮೂರು ಎನ್‌ಜಿಓಗಳಲ್ಲಿ ಕಾರ್ಕಳದ ಕದಿಕೆ ಟ್ರಸ್ಟ್ ಒಂದಾಗಿದೆ. ಕಳೆದ ವಾರ ಆಚರಿಸಲಾದ ರಾಷ್ಟ್ರೀಯ ಕೈಮಗ್ಗ ಸಪ್ತಾಹದ ಸಂದರ್ಭದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

ಇತ್ತೀಚೆಗೆ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಹಕಾರಿ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಇವರು ನಬಾರ್ಡ್‌ನ ಡಿಡಿಎಂ ಸಂಗೀತ ಕರ್ತಾ ಅವರ ಉಪಸ್ಥಿತಿಯಲ್ಲಿ ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಅವರಿಗೆ ನಬಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದರು.

ನಬಾರ್ಡ್ ಬೆಂಬಲದೊಂದಿಗೆ ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕೈಮಗ್ಗ ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ದ.ಕ.ಜಿಲ್ಲೆಯಲ್ಲಿ ಕೈಮಗ್ಗ ಕ್ಷೇತ್ರಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರಲ್ಲದೇ ಕದಿಕೆ ಟ್ರಸ್ಟ್ ಮತ್ತು ತಾಳಿಪಾಡಿ ನೇಕಾರ ಸಂಘಗಳು ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನಕ್ಕಾಗಿ ನಡೆಸಿುವ ಪ್ರಯತ್ನವನ್ನು ಶ್ಲಾಘಿಸಿದರು.

34ಕ್ಕೇರಿದ ನೇಕಾರರ ಸಂಖ್ಯೆ  : ಕದಿಕೆ ಟ್ರಸ್ಟ್ ನಶಿಸಿ ಹೋಗುತಿದ್ದ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನ ಪ್ರಾರಂಭಿಸಿದಾಗ ತಾಳಿಪಾಡಿ ಸಂಘದಲ್ಲಿ ಎಂಟು ಇದ್ದ ನೇಕಾರ ಸಂಖ್ಯೆ ಈಗ 34ಕ್ಕೇರಿದೆ. ಒಮ್ಮೆ ನೇಕಾರಿಕೆಯನ್ನು ತೊರೆದಿದ್ದ ಬಹಳಷ್ಟು ಮಂದಿ ನೇಕಾರರು ಇಂದು ಮರಳಿ ನೇಕಾರಿಕೆಗೆ ಬಂದಿದ್ದಾರೆ. ಕದಿಕೆ ಟ್ರಸ್ಟ್, ನಬಾರ್ಡ್ ಸಹಾಯದೊಂದಿಗೆ ತಾಳಿಪಾಡಿ ಸಂಘದಲ್ಲಿ 19 ಜನರಿಗೆ ತರಬೇತಿ ನೀಡಿದೆ. ಚಿಕ್ಕ ವಯಸ್ಸಿನವರೂ ಇದರಲ್ಲಿ ತರಬೇತಿ ಪಡೆದಿದ್ದಾರೆ. ಎರಡು ದಶಕಗಳ ನಂತರ ನೇಕಾರಿಕೆ ತರಬೇತಿಗೆ ಯುವ ಜನರು ಬರುತಿದ್ದಾರೆ. ಎರಡು ಜಿಲ್ಲೆಗಳಲ್ಲಿ ಒಟ್ಟು ನೇಕಾರ ಸಂಖ್ಯೆ ಈಗ 70ಕ್ಕಿಂತ ಹೆಚ್ಚಾಗಿದೆ ಎಂದು ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಅವರು ತಮ್ಮ ಟ್ರಸ್ಟ್‌ನ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು.

ಈ ಸಂದರ್ಭದಲ್ಲಿ ಕದಿಕೆ ಟ್ರಸ್ಟ್ ನೇಕಾರಿಕೆಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ನೇಕಾರ ರತ್ನ ಪ್ರಶಸ್ತಿ’ಯನ್ನು ತಾಳಿಪಾಡಿ ಸಂಘದ ಅತ್ಯಂತ ಕುಶಲ ನೇಕಾರ ಸಂಜೀವ ಶೆಟ್ಟಿಗಾರ್ ಇವರಿಗೆ ದ.ಕ. ಜಿಲ್ಲಾಧಿಕಾರಿ ಪ್ರದಾನ ಮಾಡಿದರು. ಇವರೊಂದಿಗೆ ಕುಟ್ಟಿ ಶೆಟ್ಟಿಗಾರ್ ಮತ್ತು ಲಕ್ಷ್ಮಿ ಇವರಿಗೆ ಉತ್ತಮ ನೇಕಾರ ಪ್ರಶಸ್ತಿ ಯನ್ನು ನೀಡಲಾಯಿತು. ಕುಶಲತೆಯನ್ನು ಬೇಡುವ ಎಂಭತ್ತು ಕೌಂಟ್‌ನ ನೇಕಾರ ವೆಂಕಟೇಶ್ ಮತ್ತು ಹಾಸು ಮಾಡುವ ದಾಮೋದರ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ 19 ಮಂದಿ ನೇಕಾರರು ತಾವೇ ನೇಯ್ದ ಸಹಜ ಬಣ್ಣದ ಸೀರೆ ಧರಿಸಿ ಹೆಮ್ಮೆಯಿಂದ ರಾಂಪ್ ವಾಕ್ ಮಾಡಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಈ ಸಂದರ್ಭದಲ್ಲಿ ಸೆಲ್ಕೋ ಫೌಂಡೇಶನ್‌ನ ಎಜಿಎಂ ಗುರುಪ್ರಕಾಶ್ ಶೆಟ್ಟಿ, ತಾಳಿಪಾಡಿ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ನೇಕಾರ ಮುಖಂಡರಾದ ಜಯರಾಮ್ ಶೆಟ್ಟಿಗಾರ್, ಭುವನಪ್ರಸಾದ ಹೆಗ್ಡೆ ಮಣಿಪಾಲ ಕದಿಕೆ ಟ್ರಸ್ಟ್‌ನ ಟ್ರಸ್ಟಿಗಳಾದ ಶ್ರೀಕುಮಾರ್, ಅನಿಲ್ ಹೆಗ್ಡೆ, ಸಚಿನ್ ಹಾಗೂ ತಾಳಿಪಾಡಿ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕದಿಕೆ ಟ್ರಸ್ಟ್ ಕಾರ್ಯದರ್ಶಿ ಬಿ.ಚಿಕ್ಕಪ್ಪ ಶೆಟ್ಟಿ ಇವರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News