ಮಂಗಳೂರು ವಿವಿ ಪ್ರಸಾರಾಂಗ: ನಿವೃತ್ತ ಉಪನ್ಯಾಸಕರ ಪುಸ್ತಕ ಪ್ರಕಟನೆಗೆ ಮತ್ತೆ ತೆರೆಮರೆಯ ಯತ್ನ

Update: 2021-08-21 16:51 GMT

ಮಂಗಳೂರು, ಆ.21: ನಾಲ್ಕು ವರ್ಷದ ಹಿಂದೆ ಮಂಗಳೂರು ವಿಶ್ವವಿದ್ಯಾನಿಯಲದ ಪ್ರಸಾರಾಂಗದ ಸಂಶೋಧನಾ ಮಾಲಿಕೆಯ ಕೃತಿ ಪ್ರಕಟನಾ ಸಮಿತಿಯಿಂದ ತಿರಸ್ಕೃತವಾಗಿದ್ದ ಪುಸ್ತಕವನ್ನು ಮತ್ತೊಮ್ಮೆ ವಿವಿ ಪ್ರಸಾರಾಂಗದ ಮೂಲಕ ಪ್ರಕಟಗೊಳಿಸಲು ತೆರೆಮರೆಯ ಯತ್ನ ನಡೆಯುತ್ತಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ಪುಸ್ತಕವನ್ನು ವಿವಿ ಪ್ರಸಾರಾಂಗದಿಂದ ಪ್ರಕಟಿಸಬೇಕೇ ಬೇಡವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ವಿವಿಯು ಸಮಿತಿಯೊಂದನ್ನು ರಚಿಸಿದೆ ಎಂದು ತಿಳಿದು ಬಂದಿದೆ.

ನಗರದ ಕಾಲೇಜೊಂದರ ನಿವೃತ್ತ ಉಪನ್ಯಾಸಕ ಡಾ.ಪಿ. ಅನಂತಕೃಷ್ಣ ಭಟ್ ಬರೆದಿರುವ ‘ಭಾರತ ಸಂವಿಧಾನ’ ಎಂಬ ಕನ್ನಡ ಹಾಗೂ ಆಂಗ್ಲ ಭಾಷೆಯ ಪುಸ್ತಕವನ್ನು ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವ ಪ್ರಯುಕ್ತ ವಿವಿಯ ಘಟಕ ಕಾಲೇಜು, ಸ್ನಾತಕೋತ್ತರ ಕೇಂದ್ರ ಹಾಗೂ ವಿ.ವಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಗೆ ಸ್ಮರಣಿಕೆ ರೂಪದಲ್ಲಿ ವಿವಿ ಲಾಂಛನದೊಂದಿಗೆ ನೀಡುವ ಉದ್ದೇಶವಿದೆ ಎಂದು ಜು.23ರಂದು ನಡೆದ ವಿ.ವಿ.ಸಿಂಡಿಕೇಟ್ ಸಭೆಯ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಇದಕ್ಕೆ ಕೆಲವೊಂದು ಸದಸ್ಯರು ತೀವ್ರವಾಗಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಉಲ್ಲೇಖಿತ ಈ ಪುಸ್ತಕದ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ವಿ.ವಿ. ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಸದಸ್ಯರಾಗಿ ವಿ.ವಿ.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಯರಾಜ್ ಅಮೀನ್, ಆಂಗ್ಲ ವಿಭಾಗದ ಪ್ರಾಧ್ಯಾಪಕ ಡಾ.ಪರಿಣಿತ, ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸೋಮಣ್ಣ ಅವರನ್ನು ನೇಮಿಸಲಾಗಿತ್ತು. ಪುಸ್ತಕದ ಬಗ್ಗೆ ಆಕ್ಷೇಪಗಳಿದ್ದರೆ ಲಿಖಿತವಾಗಿ ತಿಳಿಸುವಂತೆ ಸಿಂಡಿಕೇಟ್ ಸದಸ್ಯರಿಗೆ ಜು.23ರ ಸಭೆಯಲ್ಲಿ ತಿಳಿಸಲಾಗಿದೆ.

2017ರಲ್ಲಿ ತಿರಸ್ಕೃತಗೊಂಡಿದ್ದ ಪುಸ್ತಕ

ಡಾ.ಪಿ.ಅನಂತಕೃಷ್ಣ ಭಟ್ ಬರೆದಿರುವ ‘ಭಾರತ ಸಂವಿಧಾನ’ಎಂಬ ಹಸ್ತಪ್ರತಿಯನ್ನು 2017ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಪುಸ್ತಕ ರೂಪದಲ್ಲಿ ಪ್ರಕಟಿಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಸಂದರ್ಭ ಗುಣಮಟ್ಟ ಚೆನ್ನಾಗಿಲ್ಲ ಹಾಗೂ ಪ್ರಕಟನೆಗೆ ಯೋಗ್ಯವಾಗಿಲ್ಲ ಎಂಬ ಕಾರಣದಿಂದ ಈ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

2017ರಲ್ಲಿ ಡಾ.ಅನಂತ ಕೃಷ್ಣ ಭಟ್ ಅವರ ‘ಭಾರತ ಸಂವಿಧಾನ’ ಕೃತಿಯ ಹಸ್ತಪ್ರತಿಯು ವಿಶ್ವವಿದ್ಯಾನಿಲಯದ ಪ್ರಸಾರಂಗದ ಮುಂದೆ ಬಂದಿತ್ತು. ಪ್ರಸಾರಂಗವು 2017ರ ಮೇ 10ರಂದು ಆದೇಶ ನೀಡಿ (ಆದೇಶ ಸಂಖ್ಯೆ. ಮಂವಿ/ಪ್ರಸಾ/22-17-18) ಈ ಹಸ್ತಪ್ರತಿಯ ಪ್ರಕಟನೆಯ ಕುರಿತು ಅಭಿಪ್ರಾಯ ಸೂಚಿಸುವಂತೆ ಅಂದಿನ ವಿ.ವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಜಾರಾಂ ತೋಳ್ಪಾಡಿ ಅವರನ್ನು ಕೇಳಿತ್ತು.

ಅದರಂತೆ ಹಸ್ತಪ್ರತಿಯ ಬಗ್ಗೆ ಪರಿಶೀಲಿಸಿ ವರದಿ ನೀಡಿದ್ದ ಪ್ರೊ.ರಾಜಾರಾಂ ತೋಳ್ಪಾಡಿ ‘ಕೃತಿಯು ಒಂದು ಅಧ್ಯಯನಶೀಲ ಪುಸ್ತಕವಾಗಿಲ್ಲ’ ಎಂದು ವರದಿ ಕೊಟ್ಟಿದ್ದರು. ಅಲ್ಲದೆ ‘ಭಾರತ ಸಂವಿಧಾನ ಹೇಗೆ 19ನೇ ಶತಮಾನದ ಸಮಾಜ ಸುಧಾರಣ ಪ್ರಯತ್ನಗಳಲ್ಲಿ ಹಾಗೂ 20ನೇ ಶತಮಾನದ ಸ್ವಾತಂತ್ರ್ಯ ಹೋರಾಟದ ಪ್ರಕ್ರಿಯೆಯಲ್ಲಿ ಮಥನಗೊಂಡ ಮಾಲ್ಯಗಳನ್ನು ಪ್ರತಿನಿಧಿಸುತ್ತದೆ ಎನ್ನುವ ಕುರಿತು ನಡೆದಿರುವ ಅಧ್ಯಯನಗಳನ್ನು ಈ ಕೃತಿ ಗಮನಿಸುವುದಿಲ್ಲ. ಸಂವಿಧಾನ ಸಭೆಯ ಅತ್ಯಂತ ನಿಬಿಢವಾದ ಚರ್ಚೆಗಳಲ್ಲಿ ಹೇಗೆ ಈ ಮಾಲ್ಯಗಳು ಪ್ರತಿಫಲನಗೊಂಡು ಸಂವಿಧಾನದ ರೂಪವನ್ನು ಪಡೆದುಕೊಳ್ಳುತ್ತದೆ ಅನ್ನುವ ವಿಷಯದ ಬಗ್ಗೆಯೂ ವಿಶೇಷವಾದದ್ದೇನನ್ನು ಈ ಕೃತಿ ಹೇಳುವುದಿಲ್ಲ, ಹಾಗಾಗಿ ಇದು ಭಾರತದ ಸಂವಿಧಾನದ ಕುರಿತಾದ ಒಂದು ಅಧ್ಯಯನಶೀಲ ಪುಸ್ತಕವಾಗಿಲ್ಲ, ಈ ಕೃತಿಯು ಸ್ನಾತಕ ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶಿ ಪುಸ್ತಕವಾಗಿಲ್ಲ. ವಿಮಾರ್ಶಾ ಮನೋಭಾವದ ಸಾಮಾನ್ಯ ಓದುಗನಿಗೂ ಸೂಕ್ತವಾದ ಪುಸ್ತಕವೆಂದು ನನಗೆ ಅನಿಸುವುದಿಲ್ಲ ಎಂದು ತೋಳ್ಪಾಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದರು.

ಪ್ರೊ. ತೋಳ್ಪಾಡಿ ಈ ಹಸ್ತಪ್ರತಿಯು ಪ್ರಕಟನೆಗೆ ಯೋಗ್ಯವಾಗಿಲ್ಲ ಎಂದು ವರದಿಕೊಟ್ಟ ಬಳಿಕ 2018ರ ಜ.2ರಂದು ವಿ.ವಿ. ಪ್ರಸಾರಂಗವು ಡಾ.ಅನಂತಕೃಷ್ಣ ಭಟ್ ಅವರಿಗೆ ಪತ್ರ ಬರೆದು ಹಸ್ತಪ್ರತಿಯ ಬಗ್ಗೆ ಸಲ್ಲಿಕೆಯಾದ ಪರಿಶೀಲನಾ ವರದಿಯನ್ನು ಉಲ್ಲೇಖಿಸಿ, ಹಸ್ತಪ್ರತಿಯನ್ನು ಪರಿಷ್ಕರಣೆ ಮಾಡುವಂತೆ ಸೂಚಿಸಿತ್ತು. ಆದರೆ ಲೇಖಕರು ಯಾವುದೇ ಪರಿಷ್ಕರಣೆ ಮಾಡದೆ ಮರಳಿ ಪುಸ್ತಕ ಪ್ರಕಟನೆಗೆ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಡಾ. ಅನಂತಕೃಷ್ಣ ಭಟ್ ಅವರ ‘ಭಾರತ ಸಂವಿಧಾನ’ ಎಂಬ ಪುಸ್ತಕವು ಇಷ್ಟರಲ್ಲೇ ಬೇರೆ ಪ್ರಕಾಶನದ ಮೂಲಕ ಪ್ರಕಟವಾಗಿ ಮಾರುಕಟ್ಟೆಗೆ ಬಂದಿದ್ದು, ಸದರಿ ಪುಸ್ತಕಕ್ಕೆ ವಿಶ್ವವಿದ್ಯಾನಿಲಯದ ಅಧಿಕೃತ ಲಾಂಛನ ಒತ್ತುವ ಕೆಲಸಕ್ಕೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಪ್ರಕಾಶಕರಿಗೆ ಹಣ ಪಾವತಿ ಮಾಡಿ ಮುದ್ರಿತ ಪುಸ್ತಕವನ್ನು ಖರೀದಿಸಿ ವಿತರಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ನಾಮ ನಿರ್ದೇಶಿತ ಸದಸ್ಯರೊಬ್ಬರು ಈ ಪುಸ್ತಕವನ್ನೇ ಖರೀದಿಸುವ ಹಾಗೂ ವಿ.ವಿ. ಲಾಂಚನ ಒತ್ತಿ ಪುಸ್ತಕ ವಿತರಿಸುವ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

''ಕೃತಿ ಪ್ರಕಟನೆಯ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದರೆ, ಪ್ರಕಟಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪುಸ್ತಕದ ಪರಿಶೀಲನೆಗಾಗಿ ತನ್ನ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕೃತಿಯನ್ನು ಪರಿಶೀಲಿಸಿ ವರದಿ ನೀಡಲಿದೆ. ಆ ಬಳಿಕ ಸಿಂಡಿಕೇಟ್ ಸಭೆಯು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ''.
- ಪ್ರೊ.ಪಿ.ಎಲ್.ಧರ್ಮ, ಕುಲಸಚಿವರು, ಮಂಗಳೂರು ವಿವಿ
ಅಧ್ಯಕ್ಷರು, ಪುಸ್ತಕ ಪರಿಶೀಲನಾ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News