ತಲಪಾಡಿ: ಗಡಿ ನಿರ್ಬಂಧ ವಿರೋಧಿಸಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಪ್ರತಿಭಟನೆ

Update: 2021-08-25 14:56 GMT

ಮಂಜೇಶ್ವರ, ಆ.23: ಕರ್ನಾಟಕ ಸರಕಾರವು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಕೇರಳೀಯರನ್ನು ತಲಪಾಡಿ ಗಡಿಯಲ್ಲಿ ತಡೆಯುತ್ತಿದೆ ಎಂದು ಆರೋಪಿಸಿ, ಕರ್ನಾಟಕ ಸರಕಾರದ ನಿಲುವನ್ನು ಖಂಡಿಸಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ ತಲಪಾಡಿಯಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ಘಾಟಿಸಿದ ಉದುಮ ಶಾಸಕ ಸಿ.ಎಚ್.ಕುಂಞಾಂಬು ಮಾತನಾಡಿ, ಕೋವಿಡ್ ಹೆಸರಿನಲ್ಲಿ ಕರ್ನಾಟಕದ ಬಿಜೆಪಿ ಸರಕಾರ ಗಡಿ ಬಂದ್ ಮಾಡಿ ಗಡಿನಾಡ ಕೇರಳಿಗರಿಗೆ ತೊಂದರೆ ಮಾಡುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಚುನಾವಣೆ ಸಂದರ್ಭದಲ್ಲಿ ಕೇರಳ ಭೇಟಿ ನೀಡಿ ಗಡಿ ನಾಡ ಕೇರಳಿಗರಿಗೆ ಪೂರ್ಣ ಬೆಂಬಲ, ಸಹಕಾರ ತಮ್ಮಿಂದ ಇದೆ ಎಂದು ಹೇಳಿದ್ದರು. ಆದರೆ ಅವರು ಹೇಳಿದ ಮಾತುಗಳನ್ನು ಉಳಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗದ ಕಾರಣಕ್ಕೆ ಗಡಿ ನಿರ್ಬಂಧದ ಮೂಲಕ ಪ್ರತೀಕಾರ ತೀರಿಸುತ್ತಿದೆ ಎಂದು ಆರೋಪಿಸಿದ ಕುಂಞಾಂಬು, ಗಡಿಭಾಗದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದ್ದರೂ ಕೇರಳ ಬಿಜೆಪಿಗರು ಇದರ ವಿರುದ್ಧ ಯಾಕೆ ಧ್ವನಿಯೆತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಕೆ.ಆರ್.ಜಯಾನಂದ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ವರ್ಕಾಡಿ ಗ್ರಾಪಂ ಅಧ್ಯಕ್ಷ ಭಾರತಿ, ಪೈವಳಿಕೆ ಗ್ರಾಪಂ ಅಧ್ಯಕ್ಷ ಜಯಂತಿ, ಸಿಪಿಎಂ ಮುಖಂಡ ದಯಾನಂದ್, ಶಂಕರ್ ರೈ ಮಾಸ್ಟರ್, ಅಬ್ದುರ್ರಝಾಕ್ ಚಿಪ್ಪಾರ್, ಡಿ.ಬೂಬ, ಶ್ರೀನಿವಾಸ್ ಭಂಡಾರಿ, ಕಮಲಾಕ್ಷ, ನವೀನ್, ರವೀಂದ್ರ, ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News