ಮಹಿಳೆಯ ಶ್ವಾಸನಾಳದಲ್ಲಿ ಸ್ಕಾರ್ಫ್ ಪಿನ್: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಯೆನೆಪೊಯ ಆಸ್ಪತ್ರೆ ವೈದ್ಯರು

Update: 2021-08-23 10:34 GMT

ಮಂಗಳೂರು, ಆ.23: ಸುಮಾರು 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಸ್ಕಾರ್ಫ್ ಪಿನ್ ನುಂಗಿದ್ದರಿಂದ ಆಕೆಯ ಕುತ್ತಿಗೆ ಭಾಗದಲ್ಲಿ ನೋವು ಮತ್ತು ಉಸಿರಾಟದ ತೊಂದರೆಗೆ ಒಳಗಾಗಿದ್ದಳು. ಈ ಹಿನ್ನೆಲೆಯಲ್ಲಿ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದ ಆಕೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಪಿನ್ ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ನೋವಿನೊಂದಿಗೆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲುಗೊಂಡ ಮಹಿಳೆಯನ್ನು ಕ್ಷ ಕಿರಣ ಪರೀಕ್ಷೆಗೆ ಒಳಪಡಿಸಿದ ವೈದ್ಯರು ಸ್ಕಾರ್ಫ್ ಪಿನ್ನನ್ನು ಶ್ವಾಶನಾಳದಲ್ಲಿ ಗುರುತಿಸಿದರು. ಬಳಿಕ ಚಿಕಿತ್ಸೆಗೆ ಇಎನ್‌ಟಿ ವಿಭಾಗಕ್ಕೆ ಉಲ್ಲೇಖಿಸಿದ್ದರು. ತಕ್ಷಣವೇ ಅವರನ್ನು ಆಪರೇಷನ್ ಥೀಯೇಟರ್ ಗೆ ವರ್ಗಾಯಿಸಲಾಯಿತು. ಅವರಿಗೆ ಎಮರ್ಜೆನ್ಸಿ ಬ್ರೋಂಕೊಸ್ಕೋಪಿಯನ್ನು ಮಾಡಲು ನಿರ್ಧರಿಸಿ, ಇ ಎನ್ ಟಿ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ದೀಕ್ಷಿತ್ ರಾಜಮೋಹನ್ ಮತ್ತು ಜೂನಿಯರ್ ರೆಸಿಡೆಂಟ್ ಗಳಾದ ಡಾ.ಅಮೃತಾ ಮತ್ತು ಡಾ.ಜಾಸಿಮ್ ಚಿಕಿತ್ಸೆಯನ್ನು ನೀಡಿದರು. ಅವರ ಜೊತೆ ಅನಸ್ತೇಶಿಯಾ ವಿಭಾಗದ ಹಬೀಬ್ ರಹ್ಮಾನ್ (ಪ್ರೊಫೆಸರ್) ಮತ್ತು ಡಾ. ಏಜಿಝ್ ಏಜಿಜ್ (ಅಸಿಸ್ಟೆಂಟ್ ಪ್ರೊಫೆಸರ್) ಸಹಕರಿಸಿದರು.

ಪಿನ್ನನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ತೆಗೆಯಲಾಯಿತು ಮತ್ತು ಎರಡು ದಿನಗಳ ಮಟ್ಟಿಗೆ ನಿಗಾವಹಿಸಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಯಿತು. ಉಸಿರಾಟದ ನಾಳದಲ್ಲಿ ಕೆಲವು ಬಾರಿ ಸಿಕ್ಕಿಕೊಳ್ಳುವ ವಸ್ತುಗಳು ಜೀವಕ್ಕೆ ಅಪಾಯಕಾರಿಯಾಗಬಲ್ಲವು. ಅದನ್ನು ತುರ್ತು ಚಿಕಿತ್ಸೆ ಮೂಲಕ ತೆಗೆಯದಿದ್ದಲ್ಲಿ ಕ್ಲಿಷ್ಟಕರವಾಗಬಹುದು ಎಂದು ಡಾ. ದೀಕ್ಷಿತ್ ರಾಜ್‌ಮೋಹನ್ ಅಭಿಪ್ರಾಯಿಸಿದ್ದಾರೆ.

ಈ ಚಿಕಿತ್ಸೆ ಕ್ರಮವು ಅನಸ್ತೇಶಿಯಾ ಮತ್ತು ಸರ್ಜರಿ ಮಾಡುವ ವೈದ್ಯರಿಗೆ ಸವಾಲಾಗಿತ್ತು ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News