ಸಚಿವರ ಸಭೆಯಲ್ಲಿ ಮಾಜಿ ಶಾಸಕ ಗೋಪಾಲ್ ಭಂಡಾರಿಯವರಿಗೆ ಅವಮಾನ ಆರೋಪ: ಕ್ಷಮೆಗೆ ಆಗ್ರಹ

Update: 2021-08-24 13:23 GMT

ಕಾರ್ಕಳ: ಕಾರ್ಕಳ‌ ಮಾರ್ಕೆಟ್ ಉಚ್ಚಂಗಿ ನಗರದ ರಣವೀರ ಕಾಲನಿಯಲ್ಲಿ ನಡೆದ ಸಚಿವರ ಕಾರ್ಯಕ್ರಮದಲ್ಲಿ ಮಾಜಿ ಶಾಸಕ‌ ದಿ.ಗೋಪಾಲಭಂಡಾರಿಯವರ ಬಗ್ಗೆ ಉದ್ಯಮಿಯೊಬ್ಬರು ಅವಹೇಳನವಾಗಿ ಮಾತನಾಡಿದ್ದಾರೆ ಹಾಗಾಗಿ ಅವರು ತಕ್ಷಣ ಕ್ಷಮೆಯಾಚಿಸಬೇಕು ಇಲ್ಲವಾದರೆ ನಾವೂ ನಿಮ್ಮ ಭಾಷೆಯಲ್ಲಿಯೇ ಉತ್ತರ ನೀಡುವುದು ಅನಿವಾರ್ಯವಾದೀತು‌ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ, ಪುರಸಭಾ ಸದಸ್ಯ ಶುಭದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗೋಪಾಲ್ ಭಂಡಾರಿವಯರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲದವರಿಂದ ಮಾತ್ರ ಇಂತಹ ಮಾತು ಬರಲು ಸಾದ್ಯ, ಕಾರ್ಕಳ ಕ್ಷೇತಕ್ಕೆ ಭಂಡಾರಿಯವರ ಕೊಡುಗೆ ಅಪಾರ. ಅಜಾತಶತ್ರು ‌ಎನಿಸಿಕೊಂಡ ಅವರು ಅಧಿಕಾರವಿದ್ದರೂ ಅಹಂಕಾರ ತೋರಿಸದೆ ಎಲ್ಲರೊಂದಿಗೆ ಅತ್ಯಂತ ಪ್ರೀತಿ ಮತ್ತು ಗೌರವದಿಂದ ವರ್ತಿಸುತ್ತಿದ್ದ ಸರಳ ವ್ಯಕ್ತಿ, ಅವರ ಅಗಲಿಕೆಯ ನೋವು ನಮಗೆ ಇನ್ನೂ ಮಾಸಿಲ್ಲ ಇಂತಹ ಮೇರು ವ್ಯಕ್ತಿತ್ವದ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅನೇಕ ಕಾರ್ಯಕ್ರಮಗಳಲ್ಲಿ ಹಿಂದಿನ ಶಾಸಕರು ಸಚಿವರು ಎಂದು ಹೀಯಾಳಿಸುತ್ತೀರಿ, ಅದರೆ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ, ಆದರೆ ನಿಮ್ಮ ‌ಶಾಸಕರು, ಸಚಿವರು ಭ್ರಷ್ಟಾಚಾರ ಮಾಡಿರುವ ದಾಖಲೆಗಳ ಪಟ್ಟಿಯೇ ಇದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಅವರು ಸವಾಲು ಹಾಕಿದ್ದಾರೆ.

ಇತೀಚಿನ ದಿನಗಳಲ್ಲಿ ಸಚಿವರು ಭಾಗವಹಿಸುವ ‌ಸರಕಾರದ   ಕಾರ್ಯಕ್ರಮಗಳು ಪಕ್ಷದ ಕಾರ್ಯಕ್ರಮಗಳಾಗಿ ಬದಲಾಗಿದೆ, ಪಕ್ಷದ ಪದಾಧಿಕಾರಿಗಳಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶಕೊಟ್ಟು ಹಿಂದಿನ ಸರಕಾರವನ್ನು, ಗುರಿಯಾಗಿಸಿ ಅವಹೇಳನಕಾರಿಯಾಗಿ ಮಾತನಾಡುವುದು, ಟೀಕಿಸುವುದೇ ಒಂದು ಚಾಳಿಯಾಗಿದೆ, ಇದನ್ನು ತೀವ್ರವಾಗಿ ‌ಖಂಡಿಸುತ್ತೇನೆ ಎಂದರು.

ಅಧಿಕಾರಿಗಳ‌ ವಿರುದ್ಧ ದೂರು
ರಾಜಕೀಯ ಪ್ರೇರಿತವಾದ ಇಂತಹ ಕಾರ್ಯಕ್ರಮದಲ್ಲಿ ಮಾನ್ಯ ತಹಶೀಲ್ದಾರರೂ‌ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಅವರ ಮಾತಿಗೆ ತಲೆಯಾಡಿಸುವುದು ವಿಪರ್ಯಾಸ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರದ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಲಾಗುವುದು. ಅಧಿಕಾರ ಶಾಶ್ವತ‌ ಅಲ್ಲ, ಆದರೆ ಅದನ್ನು‌ ದುರುಪಯೋಗ ಪಡಿಸಿಕೊಂಡರೆ ಪರಿಣಾಮವನ್ನೂ ಎದುರಿಸಬೇಕಾದೀತು ಎಂದು ಶುಭದರಾವ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News