ಮಂಗಳೂರು: ಹೊಸ ರೂಪ ಪಡೆದ ಪುರಾತನ ಬಂದರು ಪೊಲೀಸ್ ಠಾಣೆ!

Update: 2021-08-25 09:46 GMT

ಮಂಗಳೂರು, ಆ. 25: ನಗರದಲ್ಲೇ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಮಾತ್ರವಲ್ಲದೆ, ಬಂದರು ನಗರಿ ಹೆಸರನ್ನು ಬಿಂಬಿಸುವ ಬಂದರು ಪೊಲೀಸ್ ಠಾಣೆಯ ಹಳೆ ಕಟ್ಟಡ ಹೊಸ ರೂಪವನ್ನು ಪಡೆದುಕೊಂಡಿದೆ. ದಾಖಲೆಗಳ ಪ್ರಕಾರ 132 ವರ್ಷಗಳ ಹಳೆಯ ಕಟ್ಟಡವಾಗಿರುವ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆ ಸುಣ್ಣ ಬಣ್ಣಗಳೊಂದಿಗೆ ನವೀಕರಣಗೊಂಡಿದೆ.

ಠಾಣೆಯಲ್ಲಿರುವ ದಾಖಲೆ ಪ್ರಕಾರ 1991ರಿಂದ ಇಲ್ಲಿಯವರೆಗೆ 25 ಠಾಣಾಧಿಕಾರಿಗಳನ್ನು ಈ ಹಳೆ ಕಟ್ಟಡ ಕಂಡಿದೆ. ಸಾವಿರಾರು ಸಿಬ್ಬಂದಿಯ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ 68 ಮಂದಿ ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ 1889ರಲ್ಲಿ ಸುಮಾರು 16,000 ರೂ.ಗಳೊಂದಿಗೆ ಈ ಕಟ್ಟಡ ನಿರ್ಮಾಣವಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಬಣ್ಣ ಕಳೆದುಕೊಂಡು ಸುತ್ತಮುತ್ತ ಹಳೆ ವಾಹನಗಳೊಂದಿಗೆ ನಾದುರಸ್ತಿಯಲ್ಲಿದ್ದ ಕಟ್ಟಡಕ್ಕೆ ಠಾಣೆಯ ಹಿಂದಿನ ಪೊಲೀಸ್ ನಿರೀಕ್ಷ ಗೋವಿಂದ ಬಿ. ನೇತೃತ್ವದಲ್ಲಿ ಸಾಕಷ್ಟು ನವೀಕರಣ ಕಾರ್ಯ ನಡೆಸಲಾಗಿದೆ. (2019ರ ಫೆಬ್ರವರಿ 5ರಿಂದ 2021ರ ಜೂನ್ 3ರವರೆಗೆ ಅವರು ಠಾಣೆಯಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ). ಪ್ರಸಕ್ತ ರಾಘವೇಂದ್ರ ಎಂ. ಬೈಂದೂರು ಈ ಠಾಣೆಯ ಇನ್ ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ಥಳೀಯ ಮಾಹಿತಿಯ ಪ್ರಕಾರ ಈ ಪೊಲೀಸ್ ಠಾಣೆ ಸುಮಾರು 200 ವರ್ಷಗಳಿಗೂ ಹಳೆಯದು ಎನ್ನಲಾಗುತ್ತಿದೆ. 2 ಮಹಡಿಗಳು, ಹೆಂಚಿನ ಮೇಲ್ಛಾವಣಿಯೊಂದಿಗೆ 10ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿರುವ ಈ ಪೊಲೀಸ್ ಠಾಣೆಯು 67 ಸೆಂಟ್ಸ್ ಭೂಮಿಯನ್ನು ಹೊಂದಿದೆ. ಠಾಣೆಯ ಹೊರ ಆವರಣದಲ್ಲಿ ಎಸಿಪಿ (ಸೆಂಟ್ರಲ್ ) ಕಚೇರಿಯೂ ಇದೆ. ಹಳೆ ಠಾಣಾ ಕಟ್ಟಡದ ಎಡ ಪಾರ್ಶ್ವದಲ್ಲಿ ಇಂಟರೋಗೇಶನ್ (ವಿಚಾರಣಾ) ವಿಭಾಗವಿದ್ದು, ಇದು ಹೊಸತಾಗಿ ಕೆಲ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವುದಾಗಿದೆ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲೇ ನಿರ್ಮಿತ ಕಟ್ಟಡವು ಗಟ್ಟಿಮುಟ್ಟಾಗಿದ್ದು, ಹಳೆಯ ವಾಸ್ತುಶಿಲ್ಪದೊಂದಿಗೆ ಪಾರಂಪರಿಕ ಸ್ಪರ್ಶವನ್ನು ಉಳಿಸಿಕೊಂಡಿದೆ. ಕಟ್ಟಡದ ಮೇಲ್ಛಾವಣಿ, ಬಾಗಿಲುಗಳು ಮರಮಟ್ಟುಗಳಿಂದ ಕೂಡಿದ್ದು, ಪುರಾತನ ಸರಕಾರಿ ಕಟ್ಟಡದ ನೋಟವನ್ನು ನೀಡುತ್ತದೆ. ಈ ಠಾಣೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಪಾರಂಪರಿಕ ಕಟ್ಟಡವನ್ನು ಪ್ರವೇಶಿಸಿದ ಭಾಸವಾಗುತ್ತದೆ.

ಇಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಜತೆ ಮಂಗಳೂರು ನಗರ ಉತ್ತರ ಠಾಣೆಗೆ ಭೇಟಿ ನೀಡಿ ಕಟ್ಟಡದ ನವೀಕರಣವನ್ನು ಪರಿಶೀಲಿಸಿದರು.

-------------------------

ಪಾರಂಪರಿಕ ಕಟ್ಟಡವಾಗಿ ಉಳಿಸಲು ಕ್ರಮ

ಹಳೆ ಕಟ್ಟಡದ ಮೇಲ್ಛಾವಣಿ ದುರಸ್ತಿ ಸೇರಿದಂತೆ ಇಲೆಕ್ಟ್ರಿಕ್, ಪೆಂಯ್ಟಿಂಗ್, ಪ್ಲಾಸ್ಟರಿಂಗ್ ಮೊದಲಾದ ಕಾಮಗಾರಿಗಳೊಂದಿಗೆ ನವೀಕರಣ ಮಾಡಲಾಗಿದೆ. ಹಿಂದಿನ ಇನ್ಸ್‌ಪೆಕ್ಟರ್ ಗೋವಿಂದ ರಾಜು ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಿದ್ದಾರೆ. ಇದು 1889ರಲ್ಲಿ ನಿರ್ಮಾಣವಾಗಿರುವ ಬಗ್ಗೆ ದಾಖಲೆಗಳಿವೆ. ನಗರ ವ್ಯಾಪ್ತಿಯಲ್ಲಿ ಅದರಲ್ಲೂ ಬಂದರು ಠಾಣೆಯೆಂದೇ ಕರೆಯಲ್ಪಡುವ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಲು ಅಗತ್ಯ ಕ್ರಮ ವಹಿಸಲಾಗುವುದು.

-ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News