ಇ-ಶ್ರಮ್ ಯೋಜನೆಯಡಿ ಒಂದು ಸೂರಿನಡಿ ಅಸಂಘಟಿತ ಕಾರ್ಮಿಕರು

Update: 2021-08-25 15:01 GMT

ಉಡುಪಿ, ಆ.25: ದೇಶದ ಅಸಂಘಟಿತ ವಲಯಗಳಲ್ಲಿ ಸುಮಾರು 43.7 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾಹಿತಿ ಹಾಗೂ ಸಂಘಟನೆಯ ಕೊರತೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರೆಯಬಹುದಾದ ಹಲವು ಯೋಜನೆ, ಸೌಲಭ್ಯಗಳಿಂದ ಈ ಕಾರ್ಮಿಕರು ವಂಚಿತರಾಗುತ್ತಿದ್ದಾರೆ. ಇದೀಗ ಈ ಎಲ್ಲಾ ಕಾರ್ಮಿಕರನ್ನು ಒಂದೇ ಕಡೆಯಲ್ಲಿ ನೊಂದಣಿ ಮಾಡಲು ಆ.26ರಿಂದ ಕೇಂದ್ರ ಸರಕಾರದ ಇ-ಶ್ರಮ್ ನೊಂದಣಿ ಏಕಕಾಲದಲ್ಲಿ ದೇಶಾದ್ಯಂತ ಆರಂಭಗೊಳ್ಳಲಿದೆ.

ಇ-ಶ್ರಮ್ ನೊಂದಣಿ ಮೂಲಕ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (ಎನ್‌ಡಿಯುಡಬ್ಲು) ಅನ್ನು ರಚಿಸುತ್ತಿದೆ. ಅಸಂಘಟಿತ ಕಾರ್ಮಿಕರ ನೋಂದಣಿಗೆ ಈ ವೆಬ್‌ಸೈಟ್‌ನಲ್ಲಿ ಅನುಕೂಲ ಕಲ್ಪಿಸಲಾಗುವುದು. ಹಾಗೂ ಪ್ರತಿ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು. ಇದು ಅನನ್ಯ ಗುರುತಿನ ಸಂಖ್ಯೆಯಾಗಿರುತ್ತದೆ.

ಅಸಂಘಟಿತ ಕಾರ್ಮಿಕರಿಗೆ ಪ್ರಯೋಜನ:  ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಆಧಾರದ ಮೇಲೆ ಸಾಮಾಜಿಕ ಭದ್ರತಾ ಯೋಜನೆ ಗಳನ್ನು ಸಚಿವಾಲಯಗಳು/ಸರಕಾರಗಳು ಜಾರಿಗೊಳಿಸುತ್ತವೆ. ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್‌ಅಡಿಯಲ್ಲಿ ನೋಂದಾಯಿತ ಕೆಲಸಗಾರರು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯನ್ನು ತೆಗೆದುಕೊಳ್ಳಬಹುದು. ಇದರ ಪ್ರೀಮಿಯಂ ರೂ.12ನ್ನು ಒಂದು ವರ್ಷದವರೆಗೆ ಮನ್ನಾ ಮಾಡಲಾಗುತ್ತದೆ.

ಅಸಂಘಟಿತ ಕಾರ್ಮಿಕರ ವಲಯದಲ್ಲಿ, ಸಣ್ಣ ಮತ್ತು ಕನಿಷ್ಠ ರೈತರು, ಕೃಷಿ ಕಾರ್ಮಿಕರು, ಹಂಚಿಕೆದಾರರು, ಮೀನುಗಾರರು, ಪಶು ಸಂಗೋಪನೆಯಲ್ಲಿ ತೊಡಗಿರುವವರು, ಬೀಡಿ ಕಟ್ಟುವವರು, ಲೇಬಲಿಂಗ್ ಮತ್ತು ಪ್ಯಾಕಿಂಗ್ ನವರು, ಕಟ್ಟಡ ಕಾರ್ಮಿಕರು, ಚರ್ಮದ ಕೆಲಸಗಾರರು, ನೇಕಾರರು, ಬಡಗಿ ಗಳು, ಉಪ್ಪು ಕೆಲಸಗಾರರು, ಇಟ್ಟಿಗೆ ಗೂಡು ಮತ್ತು ಕಲ್ಲಿನ ಕೆಲಸಗಾರರು, ಕ್ವಾರಿಗಳ ಕಾರ್ಮಿಕರು, ಸಾಮಿಲ್ ಕೆಲಸಗಾರರು, ಗೃಹ ಕಾರ್ಮಿಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಪತ್ರಿಕೆ ಮಾರಾಟಗಾರರು, ರಿಕ್ಷಾ ಎಳೆಯುವವರು, ಆಟೋ ಚಾಲಕರು, ರೇಷ್ಮೆ ಕೃಷಿ ಕಾರ್ಮಿಕರು, ಟ್ಯಾನರಿ ಕೆಲಸಗಾರರು, ಗೃಹ ಸೇವಕರು, ಬೀದಿ ಬದಿ ವ್ಯಾಪಾರಿಗಳು, ನರೇಗಾ ಉದ್ಯೋಗ ಖಾತ್ರಿ ಯೋಜನೆಯವರು, ಆಶಾ ಕಾರ್ಯಕರ್ತರು, ಹಾಲು ಹಾಕುವ ರೈತರು, ವಲಸೆ ಕಾರ್ಮಿಕರು ಸೇರುತ್ತಾರೆ.

ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ನೊಂದಣಿ ಯಾಗಲು, ಮೇಲಿನ ಅಸಂಘಟಿತ ಕಾರ್ಮಿಕ ವರ್ಗಗಳಲ್ಲಿ ಕೆಲಸ ಮಾಡುತ್ತಿದ್ದು, ವಯಸ್ಸು 16ರಿಂದ 59 ವಷರ್ದೊಳಗಿರಬೇಕು. ಆದಾಯ ತೆರಿಗೆ ಪಾವತಿಸುವವ ರಾಗಿರಬಾರದು. ಇಎಸ್‌ಐಸಿ ಹಾಗೂ ಇಪಿಎಫ್‌ಒ ಸದಸ್ಯರಾಗಿರಬಾರದು.

ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ, ಸಂಘಟಿತ ವಲಯ ದಲ್ಲಿ ತೊಡಗಿರುವವರು ನೊಂದಣಿಯಾಗಲು ಅವಕಾಶವಿಲ್ಲ. ಏಕೆಂದರೆ ಸಂಘಟಿತ ವಲಯವು ಖಾಸಗಿ ಅಥವಾ ಸಾರ್ವಜನಿಕ ವಲಯದ ಕೆಲಸಗಾರ ರನ್ನು ಒಳಗೊಂಡಿರುತ್ತದೆ. ಅವರು ನಿಯಮಿತ ವೇತನ, ಭತ್ಯೆಗಳು ಮತ್ತು ಇತರ ಪ್ರಯೋಜನಗಳನ್ನು ಅಲ್ಲದೇ ರಜೆಗಳ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಭವಿಷ್ಯನಿಧಿ ಮತ್ತು  ಗ್ರಾಚ್ಯುಟಿಯನ್ನು ಪಡೆಯುತ್ತಾರೆ.

ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ನೊಂದಣಿಯಾಗಲು ಕಾರ್ಮಿಕರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಮೊಬೈಲ್‌ನೊಂದಿಗೆ ತಮ್ಮ ಸಮೀಪದ ಯಾವುದೇ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೊಂದಣಿ ಮಾಡಿ ಕೊಳ್ಳಬಹುದು. ನೊಂದಣಿ ಮಾಡಿಕೊಂಡ ಕಾರ್ಮಿಕರಿಗೆ ಎ4 ಅಳತೆಯ ನೊಂದಣಿ ಪತ್ರ ನೀಡಲಾಗುವುದು.

''ಉಡುಪಿ ಜಿಲ್ಲೆಯಲ್ಲಿ ಸುಮಾರು 15,000ಕ್ಕೂ ಅಧಿಕ ಅಸಂಘಟಿತ ಕಾರ್ಮಿಕರಿದ್ದು, ಈ ಕಾರ್ಮಿಕರು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾ ಬೇಸ್‌ನಲ್ಲಿ ನೊಂದಣಿಯಾಗುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಸಂಘಟಿತ ಕಾರ್ಮಿಕರಿಗೆ ನೀಡುವ ಹಲವು ಸೌಲಭ್ಯಗಳನ್ನು ಪಡೆಯ ಬಹುದಾಗಿದೆ. ಜಿಲ್ಲೆಯಲ್ಲಿ 160ಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳಿದ್ದು, ಜಿಲ್ಲೆಯ ಕಾರ್ಮಿಕರು ತಮ್ಮ ಸಮೀಪದ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿ ಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕು'' ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News