ನಕಲಿ ಆರ್‌ಟಿಪಿಸಿಆರ್ ವರದಿ; 4 ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳದ 7 ಮಂದಿ ಸೆರೆ: ಕಮಿಷನರ್ ಶಶಿಕುಮಾರ್

Update: 2021-08-26 11:47 GMT
ಕಮಿಷನರ್ ಶಶಿಕುಮಾರ್

ಮಂಗಳೂರು, ಆ.26: ಕೇರಳದಿಂದ ಮಂಗಳೂರಿಗೆ ಆಗಮಿಸಲು ನಕಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ಆರೋಪ ದಡಿ ತಲಪಾಡಿ ಗಡಿಯಲ್ಲಿ ಎರಡು ದಿನಗಳಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರಲ್ಲಿ ಓರ್ವ ನಕಲಿ ದಾಖಲೆ ಸೃಷ್ಟಿಸಿದ್ದ ವ್ಯಕ್ತಿಯೂ ಸೇರಿದ್ದು, ನಿನ್ನೆ ಬಂಧಿಸಲಾಗಿದ್ದ ನಾಲ್ವರನ್ನು ಈಗಾಗಲೇ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬಂಧಿತರನ್ನು ಕಾಸರಗೋಡು ಚೆಂಗಳದ ಅಬ್ದುಲ್ ತಮೀಮ್ (19), ಚೆರುವತ್ತೂರಿನ ಹಸೀನ್ (31), ಹಾದಿಲ್ (25), ಕಡಪ್ಪುರದ ಇಸ್ಮಾಯಿಲ್ (48), ಚೆರ್ವತ್ತೂರಿನ ಕಬೀರ್ (24), ಮಂಜೇಶ್ವರದ ಅಬೂಬಕರ್ (28), ಪಡೀಲ್‌ನ ಮುಹಮ್ಮದ್ ಶರೀಫ್ (34) ಎಂದು ಗುರುತಿಸಲಾಗಿದೆ.

ನಾಲ್ಕು ಮಂದಿಯನ್ನು ನಿನ್ನೆ ತಪಾಸಣೆಯ ವೇಳೆ ನಕಲಿ ಆರ್‌ಟಿಪಿಸಿಆರ್ ದಾಖಲೆಗಳೊಂದಿಗೆ ಬಂಧಿಸಲಾಗಿತ್ತು. ಇಬ್ಬರನ್ನು ಇಂದು ಮಧ್ಯಾಹ್ನ ತಪಾಸಣೆಯ ವೇಳೆ ಬಂಧಿಸಲಾಗಿದ್ದು, ನಿನ್ನೆ ಬಂಧಿಸಲಾಗಿದ್ದ ನಾಲ್ಕು ಮಂದಿಗೆ ನಕಲಿ ಆರ್‌ಟಿಪಿಸಿಆರ್ ವರದಿ ನೀಡಿದ್ದ ವ್ಯಕ್ತಿಯನ್ನೂ ಇಂದು ಬಂಧಿಸಲಾಗಿದೆ. ಉಳಿದಂತೆ ಇತರ ಮೂವರು ಮಹಿಳೆಯರು ಕೂಡಾ ನಕಲಿ ಆರ್‌ಟಿಪಿಸಿಆರ್‌ನೊಂದಿಗೆ ಆಗಮಿಸಿದ್ದು, ಆದರೆ ಅವರಿಗೆ ಇದರ ಅರಿವು ಇಲ್ಲದೆ ತಮ್ಮ ಕುಟುಂಬದ ಜತೆ ಬಂದಿದ್ದ ಕಾರಣ ಅವರನ್ನು ಮರು ವಿಚಾರಣೆಗೆ ಹಾಜರಾಗುವಂತೆ ಹೇಳಿ ಕಳುಹಿಸಲಾಗಿದೆ. ಇದರಲ್ಲಿ ಇಬ್ಬರು ವಿದ್ಯಾಭ್ಯಾಸಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರಿಬ್ಬರೂ ಇಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ನಕಲಿ ಆರ್‌ಟಿಪಿಸಿಆರ್ ವರದಿಯನ್ನು ತಂದಿದ್ದರು. ಈ ನಾಲ್ಕು ಪ್ರಕರಣಗಳಲ್ಲಿ ಒಟ್ಟು 9 ನಕಲಿ ಆರ್‌ಟಿಪಿಸಿಆರ್ ವರದಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

ಕೋವಿಡ್ 2ನೆ ಅಲೆಯ ಆತಂಕದ ಜತೆಗೆ 3ನೆ ಅಲೆಯ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೆರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಸಿದೆ. 40 ಕಿ.ಮೀ.ಗೂ ಅಧಿಕ ಉದ್ದದ ಗಡಿಯನ್ನು ಕೇರಳದ ಜತೆ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಕೇರಳದಿಂದ ವಿದ್ಯಾಭ್ಯಾಸ, ಉದ್ಯೋಗ, ವೈದ್ಯಕೀಯ ಸೌಲಭ್ಯಕ್ಕಾಗಿ ಸಾವಿರಾರು ಮಂದಿ ಬಂದು ಹೋಗುತ್ತಿದ್ದಾರೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯನ್ನು ಒಳಗೊಂಡು ಜಿಲ್ಲೆಯ ಗಡಿ ಭಾಗದಲ್ಲಿ 17 ಚೆಕ್ ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯ ಅತ್ಯಂತ ಕಟ್ಟುನಿಟ್ಟಾಗಿ ಕಂದಾಯ ಹಾಗೂ ಆರೋಗ್ಯ ಅಧಿಕಾರಿಗಳ ಸಹಕಾರದಲ್ಲಿ ಪೊಲೀಸ್ ಇಲಾಖೆಯು ಜಿಲ್ಲಾಧಿಕಾರಿಯವರ ಮಾರ್ಗದರ್ಶನದ ಮೇರೆಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೇ ಉಳ್ಳಾಲ, ಕಂಕನಾಡಿ, ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಸೇರಿದಂತೆ ಒಟ್ಟು 9 ಚೆಕ್ ಪೋಸ್ಟ್‌ಗಳಲ್ಲಿ ತಲಾ 20ಕ್ಕೂ ಅಧಿಕ ಸಿಬ್ಬಂದಿಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದ್ದರೂ, ವಿವಿಧ ಪರೀಕ್ಷೆ ಹಾಗೂ ತುರ್ತು ಚಿಕಿತ್ಸೆಗೆ ಆಗಮಿಸುವವರಿಗೆ ಗಡಿ ಭಾಗದಲ್ಲಿ ಯಾವುದೇ ತೊಂದರೆ ಆಗದಂತೆಯೂ ಕ್ರಮ ವಹಿಸಲಾಗುತ್ತಿದೆ. ಹಾಗಿದ್ದರೂ ಈ ರೀತಿಯಾಗಿ ನಕಲಿ ವರದಿಗಳಿಗೆ ಮೊರೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ಗಡಿ ಭಾಗದಲ್ಲಿಯೂ ಜಿಲ್ಲಾಡಳಿತ ಸಾಕಷ್ಟು ತಪಾಸಣಾ ವ್ಯವಸ್ಥೆಯನ್ನು ಕಲ್ಪಿಸಿದೆ. ಹಾಗಾಗಿ ಗಡಿ ಭಾಗದಲ್ಲಿ ಪ್ರಯಾಣಿಸುವವರು ಇಂತಹ ತಪ್ಪು ದಾರಿಗಳನ್ನು ಅನುಸರಿಸಬಾರದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ಮಾಡಿದರು.

ಡಿಸಿಪಿಗಳಾದ ಹರಿರಾಂ ಶಂಕರ್ , ದಿನೇಶ್ ಕುಮಾರ್ ಉಪಸ್ಥಿತರಿದ್ದರು.

‘‘ಬಂಧಿಸಲ್ಪಟ್ಟಿರುವವರು ನೀಡಿರುವ ಆರ್‌ಟಿಪಿಸಿಆರ್ ವರದಿಗಳ ಕ್ಯೂರ್ ಕೋಡ್ ಸ್ಕಾನ್ ಮಾಡಿದಾಗ ಅದು ತಾಳೆಯಾಗದಿರು ವುದು, ದಿನಾಂಕದಲ್ಲಿ ವ್ಯತ್ಯಾಸಗಳ ತಾಂತ್ರಿಕ ಅಂಶಗಳ ಮೂಲಕ ನಕಲಿ ವರದಿಯನ್ನು ಗಡಿಗಳಲ್ಲಿ ಜಿಲ್ಲಾಡಳಿತ ನಿಯೋಜಿಸಿರುವ ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾಂಕ್ರಾಮಿ ರೋಗ ನಿಯಂತ್ರಣ ಕಾಯ್ದೆ ಹಾಗೂ ನಕಲಿ ದಾಖಲೆ ಸೃಷ್ಟಿ ಕಾಯ್ದೆಯಡಿ ಪ್ರಕರಣಗಳು ದಾಖಲಿಸಲಾಗಿದೆ.’’

- ಎನ್. ಶಶಿಕುಮಾರ್, ಕಮಿಷನರ್, ಮಂಗಳೂರು ಪೊಲೀಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News