ಜೋಕಟ್ಟೆ ಘಟನೆಗೂ ಪಕ್ಷಕ್ಕೂ ಸಂಬಂಧವಿಲ್ಲ: ಎಸ್ಡಿಪಿಐ ಸ್ಪಷ್ಟನೆ

Update: 2021-08-27 14:19 GMT

ಜೋಕಟ್ಟೆ : ಜೋಕಟ್ಟೆಯಲ್ಲಿ ನಿನ್ನೆ ರಾತ್ರಿ ವ್ಯಕ್ತಿಗಳಿಬ್ಬರ ನಡುವೆ ನಡೆದ ಕ್ಷುಲ್ಲಕ ಘಟನೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ವಿಲ್ಲ. ಕೆಲವು ವ್ಯಕ್ತಿಗಳು ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಎಸ್ಡಿಪಿಐ ವಿರುದ್ಧ ಸುಳ್ಳಾರೋಪ ಮಾಡುತ್ತಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿನ್ನೆ ರಾತ್ರಿ ಜೋಕಟ್ಟೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಮುಸ್ತಫಾ ಮತ್ತು ಇಮ್ರಾನ್ ಎಂಬವರ ನಡುವೆ ಮಾತಿನ ಚಕಮಕಿ ನಡೆದು ನಂತರ  ಹೊಡೆದಾಟ ನಡೆದಿತ್ತು. ವೈಯಕ್ತಿಕ ವಿಚಾರಕ್ಕೆ ಈ ಘಟನೆ ನಡೆದಿತ್ತು. ಆದರೆ ಘಟನೆ ನಡೆದ ನಂತರ ಈ ಪ್ರಕರಣದಲ್ಲಿ  ರಾಜಕೀಯ ದುರ್ಲಾಭ ಪಡೆಯಲು ಕೆಲವು ಹಿತಾಸಕ್ತಿಗಳು, ಎಸ್ಡಿಪಿಐ ಪಕ್ಷದ ವಿರುದ್ಧ ಆರೋಪ ಹೊರಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚೆಗೆ ಜೋಕಟ್ಟೆಯ ಸರಕಾರಿ ಶಾಲೆಯಲ್ಲಿ ಕೊರೋನಾ ವ್ಯಾಕ್ಸಿನ್ ನೀಡುತ್ತಿರುವ ಸಂದರ್ಭದಲ್ಲಿ ಅಲ್ಲಿ ಟೋಕನ್ ಪ್ರಕಾರವಾಗಿ ಸಾರ್ವಜನಿಕರನ್ನು ಬಿಡಲು ನಿಂತಿದ್ದ ಇಮ್ರಾನ್ ಎಂಬ ವ್ಯಕ್ತಿ ಕ್ರಮ ಸಂಖ್ಯೆ ಪ್ರಕಾರ ಸಾರ್ವಜನಿಕರನ್ನು ಒಳಗೆ ಕಳುಹಿಸುತ್ತಿರು ವುದನ್ನು ಬಿಟ್ಟು ತನ್ನ ಆಪ್ತರಿಗೆ ಮೊದಲು ಒಳಗೆ ಕಳುಹಿಸುತ್ತಿದ್ದಾನೆ ಎಂದು ಎಸ್ಡಿಪಿಐ ಕಾರ್ಯಕರ್ತ ಮುಸ್ತಫಾ ಆರೋಪಿಸಿದ್ದರು. ಇದನ್ನೇ ನೆಪವಾಗಿಸಿಕೊಂಡ ಇಮ್ರಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಸ್ತಫಾ ಅವರ ಪತ್ನಿಯ ಎದುರಲ್ಲೇ ಹಲ್ಲೆ ನಡೆಸಿದ್ದ. ಈ ಘಟನೆಯ ಬಗ್ಗೆ ನಿನ್ನೆ ರಾತ್ರಿ ಮುಸ್ತಫಾ ಅವರು ಇಮ್ರಾನ್ ಬಳಿ ಪ್ರಶ್ನಿಸಿದ್ದಾರೆ, ಆಗ ಪುನಃ ಇವರೊಳಗೆ ಮಾತಿನ ಚಕಮಕಿ ಯೊಂದಿಗೆ ಗಲಾಟೆ ನಡೆದು, ಸಣ್ಣ ಮಟ್ಟದ ಹೊಯಿ ಕೈ ನಡೆದಿತ್ತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಪುನಃ ತಂಡ ಕಟ್ಟಿಕೊಂಡು ಬಂದ ಇಮ್ರಾನ್, ಎಸ್ಡಿಪಿಐ ಕಾರ್ಯಕರ್ತ ಮುಸ್ತಫಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಸ್ಥಳದಲ್ಲಿದ್ದ ಸ್ಥಳೀಯ ಯುವಕರು ಮುಸ್ತಫಾರವರ ಬೆಂಬಲಕ್ಕೆ ನಿಂತ ಪರಿಣಾಮ ಪರಸ್ಪರ ಗಲಾಟೆ ನಡೆದಿದೆ. ಇದು ಅನಿರೀಕ್ಷಿತವಾಗಿ ನಡೆದ ಘಟನೆಯಾಗಿತ್ತು. ಮುಸ್ತಫಾರಿಗೆ ಹಲ್ಲೆ ನಡೆಸಲು ಗುಂಪು ಕಟ್ಟಿಕೊಂಡು ಬಂದಿದ್ದ ಮತ್ತು ಗಲಾಟೆಯಿಂದ ಗಾಯಗೊಂಡ ಇಮ್ರಾನ್ ನನ್ನು ಎಂಎಸ್ಎಫ್ ಕಾರ್ಯಕರ್ತರೆಂದು, ಕೆಲವರು ಲೀಗ್ ಕಾರ್ಯಕರ್ತರೆಂದು, ಇನ್ನೂ ಕೆಲವರು ಕಾಂಗ್ರೆಸ್ ಕಾರ್ಯಕರ್ತರೆಂದು ಪ್ರಚಾರ ನಡೆಸಿ ಎಸ್ಡಿಪಿಐ ಯಿಂದ ಹಲ್ಲೆ ಎಂಬ ಒಕ್ಕಣೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ಎಸ್ಡಿಪಿಐ ಪಕ್ಷ ವನ್ನು ತೇಜೋವಧೆ ನಡೆಸುತ್ತಿರುವುದು ಖೇದಕರ ಮತ್ತು ಖಂಡನಾರ್ಹವಾಗಿದೆ ಎಂದು ಜಮಾಲ್ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News