ಉಡುಪಿ; ಸಿಇಟಿ ಪರೀಕ್ಷೆಯ ಮೊದಲ ದಿನ 1721 ಮಂದಿ ಗೈರು

Update: 2021-08-28 15:51 GMT

ಉಡುಪಿ, ಆ.28: ವಿದ್ಯಾರ್ಥಿಗಳಿಗೆ ಈ ವರ್ಷದ ವೃತ್ತಿ ಶಿಕ್ಷಣದಲ್ಲಿ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶನಿವಾರ ಜಿಲ್ಲೆಯ ಒಟ್ಟು ಪ್ರಾರಂಭಗೊಂಡಿದ್ದು ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನ ಎರಡು ವಿಷಯಗಳಿಗೆ ಸಂಬಂಧಿಸಿ ನಡೆದ ಪರೀಕ್ಷೆಗೆ ಒಟ್ಟು 1721 ಮಂದಿ ಗೈರುಹಾಜರಾಗಿದ್ದರು.

ಉಡುಪಿಯ 5, ಕುಂದಾಪುರದ ಮೂರು ಹಾಗೂ ಕಾರ್ಕಳದ ಎರಡು ಕೇಂದ್ರಗಳಲ್ಲಿ ಪರೀಕ್ಷೆಗಳು ರಾಜ್ಯ ಸರಕಾರದ ಕೋವಿಡ್ ಮಾರ್ಗ ಸೂಚಿಗಳಂತೆ ಸಾಂಗವಾಗಿ ನೆರವೇರಿದವು. ಜಿಲ್ಲೆಯಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅವ್ಯವಹಾರದ ಘಟನೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ ನಡೆದ ಜೀವಶಾಸ್ತ್ರ ಹಾಗೂ ಅಪರಾಹ್ನ ನಡೆದ ಗಣಿತ ಪರೀಕ್ಷೆಗೆ ತಲಾ 3597ರಂತೆ ಒಟ್ಟು 7194 ಮಂದಿ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ ಜೀವಶಾಸ್ತ್ರಕ್ಕೆ 1465 ಮಂದಿ ಹಾಗೂ ಗಣಿತಕ್ಕೆ 256 ಸೇರಿ ಒಟ್ಟು 1721 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಗಣಿತ ಶಾಸ್ತ್ರಕ್ಕೆ 1685 ಬಾಲಕರು, 1656 ಮಂದಿ ಬಾಲಕಿಯರು ಸೇರಿದಂತೆ 3341 ಮಂದಿ ಹಾಜರಾದರೆ, ಜೀವಶಾಸ್ತ್ರಕ್ಕೆ 830 ಬಾಲಕರು ಹಾಗೂ 1302 ಬಾಲಕಿಯರು ಸೇರಿ ಒಟ್ಟು 2132 ಮಂದಿ ಹಾಜರಾದರು. ಗಣಿತಕ್ಕೆ 103 ಬಾಲಕರು ಹಾಗೂ 153 ಬಾಲಕಿಯರು ಸೇರಿ 256 ಮಂದಿ ಗೈರುಹಾಜ ರಾದರೆ, ಜೀವಶಾಸ್ತ್ರಕ್ಕೆ 963 ಬಾಲಕರು ಹಾಗೂ 502 ಬಾಲಕಿಯರು ಸೇರಿ 1465 ಮಂದಿ ಗೈರುಹಾಜರಾದರು.

ಕೋವಿಡ್ ಬಾಧಿತರು ಇಬ್ಬರು:  ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಉಡುಪಿಯಲ್ಲಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಸಮೀಪದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿ ತಲಾ ಒಬ್ಬ ಬಾಲಕ ಹಾಗೂ ಬಾಲಕಿ ಬೆಳಗ್ಗೆ ಮತ್ತು ಅಪರಾಹ್ನ ಹಾಜರಾಗಿ ಉತ್ತರಗಳನ್ನು ಬರೆದರು.

ವಿದ್ಯಾರ್ಥಿಗಳು ನಿಗದಿತ ಅವಧಿಗಿಂತ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಎಲ್ಲರೂ ಮಾಸ್ಕ್‌ಗಳನ್ನು ಧರಿಸಿದ್ದರು. ಪರೀಕ್ಷಾ ಕೇಂದ್ರಗಳನ್ನು ಎರಡೆರಡು ಬಾರಿ ಸ್ಯಾನಟೈಸ್ ಮಾಡಲಾಗಿತ್ತು. ನಾಳೆ ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News