ಸಮುದ್ರ ಪಾಲಾಗುತ್ತಿದ್ದ ಮೀನುಗಾರನ ರಕ್ಷಣೆ

Update: 2021-08-28 16:07 GMT

ಮಂಗಳೂರು, ಆ.28: ಮೀನುಗಾರಿಕೆ ವೇಳೆ ಸಮುದ್ರ ಪಾಲಾಗಿದ್ದ ಮೀನುಗಾರರೊಬ್ಬರು ಅರ್ಧ ತಾಸು ಸಮುದ್ರದಲ್ಲಿ ಈಜಾಡಿಕೊಂಡಿದ್ದು, ನಂತರ ಅವರನ್ನು ನಾಡದೋಣಿ ಮೀನುಗಾರರು ರಕ್ಷಿಸಿದ್ದಾರೆ.

ಉಳ್ಳಾಲ ಅಳಿವೆಬಾಗಿಲಿನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ. ಕಸಬ ಬೆಂಗ್ರೆಯ ನಿವಾಸಿ ನವಾಝ್ (35) ರಕ್ಷಣೆಗೊಳಗಾದವರು.

ಇತ್ತೀಚೆಗಷ್ಟೇ ಅಳಿವೆಬಾಗಿಲಿನಲ್ಲಿ ಇದೇ ರೀತಿ ಮೀನುಗಾರರೊಬ್ಬರನ್ನು ರಕ್ಷಿಸಲಾಗಿತ್ತು. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆ ಬಾಗಿಲಿನತ್ತ ಹಿಂದಿರುಗುತ್ತಿದ್ದಾಗ ಸಮುದ್ರದ ನಡುವೆ ಕೆಟ್ಟು ನಿಂತಿತ್ತು. ಈ ಸಂದರ್ಭ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದರು. ಈ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ನವಾಝ್ ಸಮುದ್ರ ಪಾಲಾಗಿದ್ದರು. ಆದರೆ ಅವರು ಅರ್ಧತಾಸಿನಷ್ಟು ಕಾಲ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಉಳ್ಳಾಲದ ನಿಶಾನ್ ಜಾಯ್ ಮಾಲಕತ್ವದ ಓಶಿಯನ್ ಬ್ರೀಝ್ ನಾಡದೋಣಿಯಲ್ಲಿದ್ದ ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ, ರಿತೀಶ್ ಹೊಯ್ಗೆ ಬಜಾರ್ ಇವರು ಜೊತೆಗೂಡಿ ಹಗ್ಗ ಎಸೆದು ನವಾಝ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News