ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

Update: 2021-08-28 16:34 GMT

ಮಂಗಳೂರು, ಆ.28 ನರರದ ಸೆಂಟ್ರಲ್ ಮಾರ್ಕೆಟ್ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಠಾತ್ ಆಗಿ ತೆರವುಗೊಳಿಸಿದ ಘಟನೆ ಶನಿವಾರ ನಡೆದಿದ್ದು, ಇದರಿಂದ ಅಸಮಾಧಾನಗೊಂಡ ಕೆಲವು ಮಹಿಳಾ ವ್ಯಾಪಾರಿಗಳು ಲಾರಿ ಮುಂದಕ್ಕೆ ಚಲಿಸದಂತೆ ಅಡ್ಡ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಸೋಮವಾರದಿಂದ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶನಿವಾರ ಇದ್ದಕ್ಕಿದ್ದಂತೆಯೇ ಯಾವುದೇ ಸೂಚನೆ ನೀಡದೆ ಮನಪಾ ಅಧಿಕಾರಿಗಳು ಸೆಂಟ್ರಲ್ ಮಾರ್ಕೆಟ್ ಬಳಿ ತೆರವು ಕಾರ್ಯಾಚರಣೆ ನಡೆಸಿದರು.

ಸೆಂಟ್ರಲ್ ಮಾರುಕಟ್ಟೆಯ ಕಟ್ಟಡವನ್ನು ನೆಲಸಮಗೊಳಿಸಿದ ಬಳಿಕ ಆಸುಪಾಸಿನಲ್ಲಿ ಕೆಲವು ಬೀದಿ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಮನಗಂಡ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.

ಯಾವುದೇ ಸೂಚನೆ ನೀಡದೆ ಏಕಾಎಕಿ ತೆರವುಗೊಳಿಸಿರುವುದರ ಬಗ್ಗೆ ಬೀದಿ ಬದಿ ವ್ಯಾಪಾರಿಗಳು ಮನಪಾ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಲಾರಿಯ ಮುಂದೆ ಕುಳಿತು ಪ್ರತಿಭಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News