ಕೊರೋನ ಸಂದರ್ಭದಲ್ಲಿ ಜನಸೇವೆಗೆ ಒದಗಿದ್ದು ಬಿಜೆಪಿ: ಸಚಿವ ಸುನೀಲ್

Update: 2021-08-29 13:50 GMT

ಉಡುಪಿ, ಆ.29: ಕೊರೋನ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಟೀಕೆ-ಟಿಪ್ಪಣಿಯಲ್ಲಿ ಮುಳುಗಿದ್ದರೆ ಬಿಜೆಪಿ ಪಕ್ಷ ಮಾತ್ರ ಜನರ ಬಳಿಗೆ ತೆರಳಿ ನೆರವು ನೀಡಿದೆ. ರಾಜಕೀಯ ಪಕ್ಷದ ಕಾರ್ಯಕರ್ತರು ಅಧಿಕಾರಕ್ಕೆ ಹೋರಾಡುತ್ತಾರೆ. ಆದರೆ ಬಿಜೆಪಿ ಇದಕ್ಕೆ ವ್ಯತಿರಿಕ್ತ. ಸೇವೆಗೆ ಮತ್ತೊಂದು ಹೆಸರು ಬಿಜೆಪಿ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಆರೋಗ್ಯ ಕಾರ್ಯಕರ್ತರ ಅಭಿಯಾನ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿ ಕೋವಿಡ್ ಸಾಂಕ್ರಾಮಿಕ ಹರಡಿದೆ. ರೋಗದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ತಜ್ಞರಿಗೆ ಇಂದೂ ಸಾಧ್ಯವಾಗಿಲ್ಲ. ಇಂಥ ಸಮಯ ಸರಕಾರ ದೇಶದಲ್ಲಿ ಆರೋಗ್ಯ ಕ್ಷೇತ್ರದ ಉನ್ನತಿಗೆ ಕೆಲಸ ಮಾಡುತ್ತಿದೆ. ಪಿಪಿಇ ಕಿಟ್, ಸ್ಯಾನಟೈಸರ್, ಆಕ್ಸಿಜನ್ ಕೊರತೆಯಾಗ ದಂತೆ ನೋಡಿಕೊಂಡಿದೆ. ಆರೋಗ್ಯ ಕೇಂದ್ರಗಳನ್ನು ಸದೃಢಗೊಳಿಸುತ್ತಿದೆ. 3ನೇ ಅಲೆಗೆ ಮುಂಜಾಗ್ರತೆಯಾಗಿ ವಾತ್ಸಲ್ಯ ಯೋಜನೆ ಮೂಲಕ ರಾಜ್ಯವ್ಯಾಪಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲೆಯ ಪಾಸಿಟಿವಿಟಿ ದರ ಕಳೆದ 3 ದಿನಗಳಿಂದ ಶೇ.1.4ಕ್ಕೆ ಇಳಿಕೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು, ಹಬ್ಬಗಳು ಬರುವುದರಿಂದ ಈಗಲೇ ಮೈಮರೆಯುವಂತಿಲ್ಲ. ದೇಶದಲ್ಲಿ ಶನಿವಾರ ಒಂದೇ ದಿನ ದಾಖಲೆಯ ಒಂದು ಕೋಟಿ ವ್ಯಾಕ್ಸಿನ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 9,78,680 ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಸೇವಾ ಹಿ ಸಂಘಟನ್ ಧ್ಯೇಯದಡಿ ಕೋವಿಡ್ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ದೇಶಾದ್ಯಂತ 2 ಲಕ್ಷ ಕಾರ್ಯಕರ್ತರಿಗೆ ಆರೋಗ್ಯ ತರಬೇತಿ ನೀಡಲಾಗುತ್ತಿದೆ. ಪ್ರತೀ ಬೂತ್‌ನಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ನೇಮಿಸಿ ಕೊಳ್ಳಲಾಗುತ್ತದೆ. ಕೋವಿಡ್ 2ನೇ ಅಲೆ ಸಂದರ್ಭ ಜಿಲ್ಲೆಯಲ್ಲಿ 800 ಕಾರ್ಯಕರ್ತರು ಗ್ರಾಮಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದರು.

ಕಾಪು ಶಾಸಕ ಲಾಲಾಜಿ ಮೆಂಡನ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ. ರಾಮಚಂದ್ರ ಕಾಮತ್, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News